ಬೆಳಗಾವಿ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ VB-G RaM G ಯೋಜನೆಯೆಂದು ಬದಲಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುವರ್ಣಸೌಧದ ಹೊರಗಡೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗರು ರಾಜಭವನವನ್ನು ಇಂದು ಲೋಕಭವನ ಎಂದು ಬದಲಾಯಿಸಿದ್ದಾರೆ. ಇದು ಸರ್ಕಾರದ ಆಸ್ತಿಯಾಗಿದ್ದು, ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಹಾಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ VB-G RaM G ಯೋಜನೆಯೆಂದು ಹೆಸರು ಬದಲಾಯಿಸಿದ್ದಾರೆ. ಬಿಜೆಪಿ ಸರ್ಕಾರ ಈ ರೀತಿ ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಹಾತ್ಮಾಗಾಂಧಿ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಇಷ್ಟಪಡದ ಬಿಜೆಪಿಯವರಿಗೆ ಬಡವರನ್ನೂ ಕಂಡರೂ ಆಗುವುದಿಲ್ಲ. ದೇಶದ ಬಡವರಿಗೆಂದು ತಂದಿರುವ ಯಾವುದೇ ಯೋಜನೆಗಳಿಗೆ ಬಿಜೆಪಿಯವರ ಸಹಮತಿಯಿಲ್ಲ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕಡೆಗಣಿಸುವ ಬಿಜೆಪಿಯವರು , ಕರ್ನಾಟಕದಲ್ಲಿ ಬಡವರಿಗಾಗಿ ತಂದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು. ಆದರೆ ಈ ಜನಪರ ಯೋಜನೆಯನ್ನು ದೇಶದೆಲ್ಲೆಡೆ ಬಿಜೆಪಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ದೇಶದ ಸಾಲದ ವಿಚಾರವಾಗಿ ಕಿಡಿಕಾರಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 2 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು 148 ಲಕ್ಷ ಕೋಟಿ ಹೆಚ್ಚಾಗಿದೆ. ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆಹೋಗುತ್ತಿದೆ ಎಂದರು.
ಇನ್ನು ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದ್ದರು. ಈ ಯಾವುದೇ ಭರವಸೆಗಳನ್ನು ಮೋದಿ ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು , ಇಂತಹ ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.











