ನಗರೀಕರಣದ ಕಡೆಗೆ ಹೆಚ್ಚಿನ ಗಮನ ಕೊಟ್ಟಿರುವ ನಾವುಗಳು ಕಲೆ ಮತ್ತು ಪ್ರಕೃತಿಯ ಮೇಲಿನ ಸಂವೇದನಾಶೀಲತೆಯನ್ನು ಮರೆತುಹೋಗಿದ್ದೇವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಕಲೆ ಹಾಗೂ ಸಂಸ್ಕೃತಿಗಳು ನಮ್ಮ ನಾಗರೀಕತೆಯ ಮೂಲ ಅಂಶಗಳು. ಈ ಮೂಲ ಅಂಶಗಳೇ ನಮ್ಮಲ್ಲಿನ ಕವಿ ಹೃದಯಕ್ಕೆ ಪ್ರೇರಣೆ ನೀಡುವ ಪ್ರಮುಖ ವಿಷಯಗಳು. ಕಾಡು ಮಲ್ಲೆ ಕವನ ಸಂಕಲನದ ಮೂಲಕ ಸಾ.ನಾ ರಮೇಶ್ ಗಂಭೀರವಾಗಿ ಪರಿಗಣಿಸಬೇಕಾದ ಕವಿಯಾಗಿ ಹೊರಹೊಮ್ಮಿದ್ದಾರೆ.
ಮುಂದುವರೆದು, ಪ್ರಕೃತಿಯ ಕಡೆ ಹಾಗೂ ತಮ್ಮ ಜೀವನದ ಪ್ರಾಥಮಿಕ ಹಂತದ ಅನುಭವನದ ಬುತ್ತಿಯನ್ನ ತಮ್ಮ ಹದವಾದ ಭಾಷೆಯಲ್ಲಿ ಕವನದ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ. ಮೂಲತಃ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಆಗಿರುವ ರಮೇಶ್ ಅವರು ತಮ್ಮ ಯೋಜನೆಯಲ್ಲಿ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸುವಂತಹ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.
ನಗರೀಕರಣದಿಂದ ನಾವುಗಳು ನಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮುಂದಿನ ಪೀಳೀಗೆಗಳು ಇವುಗಳನ್ನು ಮರೆತು ಹೋಗುವ ಮುನ್ನ ಅವರಲ್ಲಿ ಆಸಕ್ತಿಯನ್ನು ಹುಟ್ಟಿಸುವಂತಹ ಕಾರ್ಯಗಳು ಹೆಚ್ಚಾಗಬೇಕು ಎಂದು ಹೇಳಿದ್ದಾರೆ.