ಉಡುಪಿ : ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಮೂರು ದಿನಗಳ ಕಾಲ ಟೆಂಪಲ್ ರನ್ ನಡೆಸುತ್ತಿರುವ ಡಿಕೆಶಿ ಇಂದು ಕೊಲ್ಲೂರಿನಲ್ಲಿ ಕುಟುಂಬ ಸಮೇತರಾಗಿ ನವಚಂಡಿಕಾಯಾಗ ನಡೆಸಿದ್ದಾರೆ. ನರಸಿಂಹ ಅಡಿಗ ನೇತೃತ್ವದಲ್ಲಿ ಈ ಯಾಗ ನಡೆಸಲಾಗಿದೆ.
ಕೊಲ್ಲೂರಿನಲ್ಲಿ ನವಚಂಡಿಕಾಯಾಗ ಯಾಗ ಮುಗಿಸಿದ ಬಳಿಕ ನೇರವಾಗಿ ಉಡುಪಿಗೆ ಡಿಕೆಶಿ ಕುಟುಂಬ ಪ್ರಯಾಣಿಸಲಿದೆ.
ಇನ್ನು ಟೆಂಪಲ್ ರನ್ ನಡುವೆಯೇ ಡಿಕೆ ಶಿವಕುಮಾರ್ ಮುಂದಿನ ಸಿಎಂ ತಾನೇ ಎಂಬುದರ ಬಗ್ಗೆ ಮತ್ತೊಮ್ಮೆ ಪರೋಕ್ಷವಾಗಿ ಮಾತನಾಡಿದ್ದಾರೆ. ಮುಂದಿನ ಸಿಎಂ ಆಗಬೇಕು ಎಂಬ ಬಯಕೆ ನಿಮಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ನಾವು ರಾಜಕಾರಣಿಗಳು, ಖಾವಿ ಹಾಕಿಕೊಂಡಿಲ್ಲ, ಬಿಳಿ ಬಟ್ಟೆ ಹಾಕಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಖುರ್ಚಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂಬುದರ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ.