ಕನ್ನಡದಲ್ಲಿ ತಮ್ಮದೇ ಆದ ಶೈಲಿಯ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ “ಲಕಲಕ ಲ್ಯಾಂಬರ್ಗಿನಿ” ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಈ ಹಾಡನ್ನು ನಿರ್ಮಿಸಿದ್ದಾರೆ. ನಂದಕಿಶೋರ್ ನಿರ್ದೇಶಿಸಿದ್ದಾರೆ. ಜನಪ್ರಿಯ ನಟಿ ರಚಿತಾ ರಾಂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ಚಂದನ್ ಶೆಟ್ಟಿ ಅವರ ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ ಹೀಗೆ ಹಲವು ಹಾಡುಗಳನ್ನು ಅವರು ನೀಡಿದ್ದಾರೆ.
ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಲು ಮುಂದಾದರಂತೆ. ಹಾಗೆ ನೋಡಿದರೆ ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಇರಾದೆಯೂ ಇತ್ತು. ಆದರೆ ಕೊರೋನ ಇದಕ್ಕೆಲ್ಲ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ಅಭಿನಯಿಸಿರುವ ಖ್ಯಾತ ನಟಿ ರಚಿತಾ ರಾಂ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ತಂತ್ರಜ್ಞರಿಗೆ, ಹೆಚ್ಚಾಗಿ ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್ ನಲ್ಲೇ ಅಪಾರವೆಚ್ಚದ ಈ ಹಾಡನ್ನು ನಿರ್ಮಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎನ್ನುತ್ತಾರೆ ಚಂದನ್ ಶೆಟ್ಟಿ.

ನನ್ನ ಮಗಳು ಬಿಂದ್ಯಾಳನ್ನು ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಅದನ್ನು ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿದೆ. ಹಾಗೆ ಈ ಹಾಡು ನಿರ್ಮಾಣವಾಗಲು ನನ್ನ ಮಗಳು ಬಿಂದ್ಯಾ ಕಾರಣ. ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ ಎಂದರು ನಿರ್ಮಾಪಕ ಕೇಶವ್.
ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ. ನಿಜಕ್ಕೂ ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಕೇಕ್ ಮುಂತಾದವುಗಳನ್ನು ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎನ್ನುವುದು ನಿರ್ದೇಶಕ ನಂದ ಕಿಶೋರ್ ಅವರ ಮಾತುಗಳು.
ಅಂದಹಾಗೆ, ಈ ಲಕ ಲಕ ಲ್ಯಾಂಬರ್ಗಿನಿ ಹಾಡಿಗೆ ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ , ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿದೆ.