ಅರಸನೊಬ್ಬನ ಮನದರಸಿಯ ನೆನಪು, ಒಂದು ಅಮರ ಪ್ರೇಮದ ಸ್ಮಾರಕ, ಮಠವೊಂದರ ಕೊಳ, ಚಂಪಕ(ಸಂಪಿಗೆ) ವನದ ಪುಷ್ಕರಣಿ… ಹೀಗೆ ಹಲವು ಐತಿಹ್ಯ, ಚರಿತ್ರೆಯ ಆಯಾಮಗಳನ್ನು ಹೊಂದಿರುವ ಕಲ್ಯಾಣಿಯೊಂದರ ಕಾಯಕಲ್ಪಕ್ಕೆ ಇದೀಗ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ‘ರಾಕಿ ಬಾಯ್’ ಯಶ್ ಕೈಜೋಡಿಸಿದ್ದಾರೆ!
ತಮ್ಮ ಜನಪ್ರಿಯತೆ, ಸ್ಟಾರ್ ಡಂ ನ ಪ್ರಯೋಜನಗಳು ನಾಡಿನ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ‘ಯಶೋಮಾರ್ಗ’ ಟ್ರಸ್ಟ್ ಮೂಲಕ ಹತ್ತು ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯಶ್ ಅವರ ಆಸಕ್ತಿಯಿಂದಾಗಿ ಈಗಾಗಲೇ ನಾಡಿನ ಹಲವು ಕೆರೆಕಟ್ಟೆಗಳು ಗತವೈಭವಕ್ಕೆ, ಯಶೋಮಾರ್ಗಕ್ಕೆ ಮರಳಿವೆ. ಅದಕ್ಕೆ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯೇ ಮೇರು ನಿದರ್ಶನವಾಗಿ ಎಲ್ಲರ ಕಣ್ಣ ಮುಂದಿದೆ. ಇದೀಗ ಅಂತಹದ್ದೇ ಪುನರುಜ್ಜೀವನ ಅವಕಾಶ, ಕಳೆದ ನಾಲ್ಕು ನೂರು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ‘ಚಂಪಕ ಸರಸು’ ಕಲ್ಯಾಣಿಗೆ ಸಿಕ್ಕಿದೆ.
ಸೂಪರ್ ಸ್ಟಾರ್ ಗಮನ ಸೆಳೆದಿರುವ ಈ ಚಂಪಕ ಸರಸು ಎಂಬ ಸುಂದರ ಕಲ್ಯಾಣಿ ಇರುವುದು ಶಿವಮೊಗ್ಗ ಜಿಲ್ಲೆಯ ಆನಂದಪುರಂ ಎಂಬ ಪುಟ್ಟ ಪಟ್ಟಣದಲ್ಲಿ. ಆನಂದಪುರಂ-ಶಿಕಾರಿಪುರ ರಸ್ತೆಯಿಂದ ಅರ್ಧ ಕಿ.ಮೀ ದೂರದಲ್ಲಿ ಜೋಳದ ಹೊಲಗಳ ನಡುವೆ ಇರುವ ಈ ಮನಮೋಹಕ ಪುಷ್ಕರಣಿಗೆ ಬರೋಬ್ಬರಿ 400 ವರ್ಷಗಳ ಸುದೀರ್ಘ ಇತಿಹಾಸವಿದೆ. ಆ ಇತಿಹಾಸದೊಂದಿಗೆ ಒಂದು ಮಧುರ ಪ್ರೇಮದ ತಳಕಿದೆ, ಪ್ರೇಮ ಸ್ಮಾರಕದ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ; ಜಗದ್ವಿಖ್ಯಾತ ಪ್ರೇಮ ಸ್ಮಾರಕ ತಾಜ್ ಮಹಲ್ ನಿರ್ಮಾಣಕ್ಕೂ ಮುಂಚೆಯೇ ಅಂತಹದ್ದೇ ಪ್ರೇಮದ ಸ್ಮಾರಕವಾಗಿ ನಿರ್ಮಾಣವಾದ ಐತಿಹಾಸಿಕ ಹೆಚ್ಚುಗಾರಿಕೆ ಕೂಡ ಈ ಕೊಳದ್ದು ಎಂಬುದು ವಿಶೇಷ.
ಕೆಳದಿಯ ಪ್ರಮುಖ ರಾಜ ವೆಂಕಟಪ್ಪ ನಾಯಕನ ಮನ ಗೆದ್ದಿದ್ದ ಚಂಪಕ ಎಂಬ ಯುವತಿಯನ್ನು ಆತ, ತನ್ನ ಪಟ್ಟದ ಅರಸಿಯ ವಿರೋಧದ ನಡುವೆಯೂ ಮದುವೆಯಾಗುತ್ತಾನೆ. ಆದರೆ, ತನ್ನ ಜಾತಿ ಮತ್ತು ಬಡತನದ ಕಾರಣಕ್ಕೆ ಚಂಪಕ, ರಾಣಿವಾಸದವರು ಮತ್ತು ರಾಜ್ಯದ ಜನರ ನಿಂದನೆ, ಮೂದಲಿಕೆಗೆ ಒಳಗಾಗುತ್ತಾಳೆ. ಆ ನೋವಿನಲ್ಲೇ ಆಕೆ ಕೆಲವೇ ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾಳೆ. ಆದರೆ, ಆಕೆಯನ್ನು ಬಹಳ ಪ್ರೀತಿಸುತ್ತಿದ್ದ ರಾಜ ವೆಂಕಟಪ್ಪ, ತನ್ನ ಮುದ್ದಿನ ಪ್ರೇಯಸಿಯ ನೆನಪಿಗಾಗಿ ಆಕೆಯ ಗ್ರಾಮದಲ್ಲಿ ಒಂದು ಸುಂದರ ಕೊಳ ನಿರ್ಮಿಸಿ ಅದಕ್ಕೆ ‘ಚಂಪಕ ಸರಸು’ ಎಂದು ಹೆಸರಿಸುತ್ತಾನೆ ಎಂಬುದು ಕೊಳದ ಕುರಿತು ಇರುವ ಒಂದು ಐತಿಹ್ಯ.
ಕಾಲಾ ನಂತರದಲ್ಲಿ ಆ ಕೊಳದ ದಡದಲ್ಲಿ ಮಹಾಮತ್ತಿನ ಮಠ ಎಂಬ ಗುರುಪೀಠ ಅಸ್ತಿತ್ವಕ್ಕೆ ಬಂದಿತು. ಕೊಳದ ಸುತ್ತಮುತ್ತ ಸಂಪಿಗೆ ಮರಗಳ ಸಾಲು ಇತ್ತು. ಹಾಗಾಗಿ ಕೊಳಕ್ಕೆ ಚಂಪಕ ಸರಸು ಎಂಬ ಹೆಸರು ಬಂದಿತು ಎಂಬ ಮತ್ತೊಂದು ವಾದವೂ ಇದೆ. ಆದರೆ, ತನ್ನ ನಿರ್ಮಾಣ ಇತಿಹಾಸದ ಹಲವು ಮಜಲುಗಳನ್ನು, ದಂತಕತೆಗಳನ್ನೂ, ಹಲವು ಆಯಾಮದ ವಾದಗಳನ್ನೂ ಹೊಂದಿದ್ದರೂ, ಕಳೆದ ಹಲವು ದಶಕಗಳಿಂದ ಈ ಕೊಳ ಜನಬಳಕೆ ಇಲ್ಲದೆ, ನಿರ್ಲಕ್ಷ್ಯಕ್ಕೊಳಗಾಗಿತ್ತು. ಅಲ್ಲದೆ, ಬೃಹತ್ ಪುಷ್ಕರಣಿಯಾಗಿ, ಹಲವು ವಿಸ್ಮಯಕಾರಿ ರಚನೆಗಳಿಂದ ಕುತೂಹಲಕಾರಿಯಾಗಿದ್ದರೂ ಕೆಳದಿ ಅರಸರ ಅವಧಿಯಲ್ಲಿ ನಿರ್ಮಾಣವಾದ ಇತಿಹಾಸವಿದ್ದರೂ ಈವರೆಗೆ ಪ್ರಾಕ್ತನಶಾಸ್ತ್ರ ಮತ್ತು ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೂ ಪಾತ್ರವಾಗಿದೆ. ಹಾಗಾಗಿ ಹೇಳುವರು, ಕೇಳುವರರಿಲ್ಲದಂತಾಗಿದ್ದ ಕೊಳದ ಸುತ್ತಮುತ್ತ ಬಹುಬೇಡಿಕೆಯ ಜಂಬಿಟ್ಟಿಗೆ ಕಲ್ಲಿನ ಗಣಿಗಾರಿಕೆ ಗರಿಗೆದರಿತ್ತು. ಅದರಿಂದಾಗಿ ಕೊಳದಲ್ಲಿ ನೀರಿನ ಪ್ರಮಾಣ ಕುಸಿತದ ಜೊತೆಗೆ ಅದರ ಕಲ್ಲುಗೋಡೆ, ಪಾವಟಿಗೆ, ಮಧ್ಯದ ಮಂಟಪ, ಎದುರಿನ ದೇವಸ್ಥಾನಗಳೂ ಕುಸಿಯುವ ಆತಂಕ ಎದುರಾಗಿತ್ತು.
ಇಂತಹ ಅಪಾಯದ ಹೊತ್ತಲ್ಲಿ, ಎಚ್ಚೆತ್ತ ಸ್ಥಳೀಯ ಕನ್ನಡ ಸಂಘ, ಇತಿಹಾಸ ಮತ್ತು ಪರಂಪರೆ ಉಳಿಸಿ ವೇದಿಕೆ ಮುಂತಾದ ಸಂಘಸಂಸ್ಥೆಗಳ ಯುವಕರು ಕಲ್ಯಾಣಿಯ ಸ್ವಚ್ಛಗೊಳಿಸುವ ಜೊತೆಗೆ, ಅದರ ರಕ್ಷಣೆಗೆ ಪಟತೊಟ್ಟರು. ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಜಲಮೂಲಗಳ ರಕ್ಷಣೆಯ ಕಾಳಜಿ ಮಾಡುತ್ತಿರುವ ಪರಿಸರವಾದಿ ಮತ್ತು ಪತ್ರಕರ್ತ ಶಿವಾನಂದ ಕಳವೆಯವರನ್ನು ಕರೆಸಿ ಕಲ್ಯಾಣಿಯನ್ನು ತೋರಿಸಿ, ಅದರ ಪುನರುಜ್ಜೀವನಕ್ಕೆ ಮಾರ್ಗದರ್ಶನ ಮಾಡುವಂತೆ ಕೋರಿದರು. ಕಳವೆಯವರು ಅಪರೂಪದ ವಿನ್ಯಾಸದ ಕೊಳದ ಶಿಥಿಲ ಸ್ಥಿತಿ ಕಂಡು ಮರುಗಿ, ಅದನ್ನು ಉಳಿಸುವ ದಾರಿಗಳನ್ನು ಯೋಚಿಸುವಾಗ ನೆನಪಾಗಿದ್ದು ಯಶ್. ಈ ಮೊದಲು ಕೊಪ್ಪಳದ ತಲ್ಲೂರು ಕೆರೆ ಪುನರುಜ್ಜೀವನದ ಯಶೋಮಾರ್ಗ ಯೋಜನೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದ ತಮ್ಮ ಅನುಭವ ಮತ್ತು ಸಂಪರ್ಕದ ಬಲದ ಮೇಲೆ ಯಶ್ ಅವರನ್ನು ಭೇಟಿಯಾದಾಗ ಈ ಕಲ್ಯಾಣಿಯ ಫೋಟೋ ತೋರಿಸಿ ಮಾಹಿತಿ ನೀಡಿದಾಗ, ಯಶ್ ಖಂಡಿತವಾಗಿ ಅದರ ಪುನರುಜ್ಜೀವನ ಯೋಜನೆ ಕೈಗೆತ್ತಿಕೊಳ್ಳೋಣ ಎಂದು ಗ್ರೀನ್ ಸಿಗ್ನಲ್ ತೋರಿಸಿದರು!
ಅಲ್ಲಿಗೆ, ಶತಮಾನಗಳ ಅವಜ್ಞೆ, ಅಜ್ಞಾತವಾಸದಿಂದ ‘ಚಂಪಕ ಸರಸು’ಗೆ ಮುಕ್ತಿ ಸಿಕ್ಕಿತು. ಇದೀಗ ಕಳೆದ ಒಂದು ವಾರದಿಂದ ಯಶೋಮಾರ್ಗ ಮತ್ತು ಕಳವೆಯವರ ಮಾರ್ಗದರ್ಶನದಲ್ಲಿ ‘ಸರಸು’ಗೆ ಗತ ವೈಭವದ ಮೆರುಗು ನೀಡುವ ಕಾರ್ಯ ಭರದಿಂದ ಸಾಗಿದೆ.
ಯಶೋಮಾರ್ಗದ ಯೋಜನೆಯಲ್ಲಿ, ಕೊಳದ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆ, ಕೊಳದ ಆವರಣ ಗೋಡೆ ಮತ್ತು ಮಧ್ಯದ ಮಂಟಪದ ವೇದಿಕೆಯಲ್ಲಿ ಬೆಳೆದಿರುವ ಮರಮಟ್ಟುಗಳನ್ನು ಮೂಲಕಟ್ಟಡಕ್ಕೆ ಧಕ್ಕೆಯಾಗದಂತೆ ತೆರವು ಮಾಡುವುದು, ಹಿಂಬಾಗಿಲು ದುರಸ್ತಿ, ಬಿದ್ದಿರುವ ಶಿಲ್ಪಗಳನ್ನು ಸರಿಪಡಿಸುವುದು, ಮಂಟಪಕ್ಕೆ ಬಣ್ಣ, ಟೈಲ್ಸ್ ಹಾಕುವುದು, ಮೆಟ್ಟಲು ದುರಸ್ತಿ, ಪ್ರವೇಶಕ್ಕೆ ಗೇಟ್ ನಿರ್ಮಾಣ, ಕೊಳದ ಸುತ್ತ ಇಂಗುಗುಂಡಿ, ಮರಗಳಿಗೆ ಕಟ್ಟೆ ಕಟ್ಟುವುದು ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಕಾರ್ಯಗಳ ಜೊತೆಗೆ ಅಪರೂಪದ ಐತಿಹಾಸಿಕ ಮತ್ತು ವಾಸ್ತು ಮಹತ್ವದ ಈ ಪುಷ್ಕರಣಿಯನ್ನು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಅದರ ಸುತ್ತಮುತ್ತಲ ಪ್ರದೇಶವನ್ನು ರಕ್ಷಿತ ವಲಯವಾಗಿ ಘೋಷಿಸುವ ಮೂಲಕ ಮುಂದಿನ ದಿನಗಳಲ್ಲಿ ಒತ್ತುವರಿ ಮತ್ತು ಜಂಬಿಟ್ಟಿಗೆ ಗಣಿಗಾರಿಕೆಯಿಂದ ಅದನ್ನು ಶಾಶ್ವತವಾಗಿ ಮುಕ್ತಗೊಳಿಸುವ ಕೆಲಸ ಸ್ಥಳೀಯ ಸಂಘ-ಸಂಸ್ಥೆಗಳಿಂದ ಆಗಬೇಕಿದೆ. ಜೊತೆಗೆ ಅಲ್ಲಿಗೆ ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ, ಕೊಳದ ಕಾವಲು ವ್ಯವಸ್ಥೆಗಳೂ ಜರೂರಾಗಿ ಆಗಬೇಕಾದ ಪಟ್ಟಿಯಲ್ಲಿವೆ.
ಆ ನಿಟ್ಟಿನಲ್ಲಿ ಇತಿಹಾಸ ಮತ್ತು ಪರಂಪರೆ ಉಳಿಸಿ ವೇದಿಕೆಯ ಕ್ರಿಯಾಶೀಲ ಯುವಕ ಬಿ ಡಿ ರವಿ, ಪಾರಂಪರಿಕ ತಾಣದ ರಕ್ಷಣೆಯ ನಿಟ್ಟಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ರಾಜೇಂದ್ರ ಗೌಡರು, ಕೆಲವು ವರ್ಷಗಳಿಂದ ಬಹುತೇಕ ಜನಮಾನಸದಿಂದ ಬದಿಗೆ ಸರಿದಿದ್ದ ಅಪರೂಪದ ವಿನ್ಯಾಸದ ಕೊಳವನ್ನು ತಮ್ಮ ನಿರಂತರ ಬರಹ ಮತ್ತು ಸಾಹಿತ್ಯ ಕೃತಿಯ ಮೂಲಕ ಜನಸ್ಮೃತಿಯ ಮುಖ್ಯವಾಹಿನಿಗೆ ತಂದ ಲೇಖಕ ಹಾಗೂ ಉದ್ಯಮಿ ಕೆ ಅರುಣ್ ಪ್ರಸಾದ್ ಹಾಗೂ ಇತರ ಹತ್ತಾರು ಸ್ಥಳೀಯರ ಕಾರ್ಯ ಶ್ಲಾಘನೀಯ.