ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರಸರಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ ಎಂದು ಕಿಸಾನ್ ಮೋರ್ಚಾ ಆರೋಪಿಸುವ ಮೂಲಕ ಫೆಬ್ರವರಿ 6 ರಂದು ದೇಶದಾದ್ಯಂತ ರಸ್ತೆ ತಡೆ ಚಳವಳಿಗೆ ಕರೆನೀಡಿದೆ. ಇದಕ್ಕೆ ಕರ್ನಾಟಕದ ರೈತ ಸಂಘಗಳು ಬೆಂಬಲ ಸೂಚಿಸಿದ್ದಾರೆ.
ಇತ್ತ ಮೋದಿ ಸರ್ಕಾರ ಚಳವಳಿ ನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ, ಆದರೆ ಚಳುವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿರುವುದು ರಸ್ತೆಗಳಿಗೆ ಮುಳ್ಳುತಂತಿ ಬೇಲಿ ಹಾಕಿರುವುದು, ದ್ವಂದ್ವ ನೀತಿಯಾಗಿದೆ. ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ಕರೆ ಮೇರೆಗೆ ರಾಜ್ಯದಲ್ಲಿಯೂ ರೈತ, ದಲಿತ, ಕಾರ್ಮಿಕ, ಐಕ್ಯಹೋರಾಟ ಸಮಿತಿಯು ಫೆಬ್ರವರಿ 6 ರಂದು ಕರ್ನಾಟಕದಲ್ಲಿಯೂ ರಸ್ತೆ ತಡೆ ಚಳವಳಿ ನಡೆಸುವುದಾಗಿ ತಿಳಿಸಿದೆ.
ಫೆಬ್ರವರಿ 6 ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ 12ಗಂಟೆಯಿಂದ 2 ಗಂಟೆ ತನಕ ರಸ್ತೆ ಬಂದ್ ಚಳವಳಿ ನಡೆಸುವ ಮೂಲಕ ದೇಶದ ರೈತರ ಹೋರಾಟವನ್ನು ಬೆಂಬಲಿಸಬೇಕು,ಈ ಹೋರಾಟ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಪ್ರತಿಭಟನಾ ನಿರತ ರೈತರ ಮೇಲೆ ಹಾಗೂ ಈ ಹೋರಾಟದ ಬಗ್ಗೆ ಮಾಧ್ಯಮಗಳಿಗೆ ಸುದ್ದಿ ಮಾಡುತ್ತಿದ್ದ ವರದಿಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಖಂಡನೀಯ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿಯು ಸಹ ಇಂತಹ ಅತಿರೇಕದ ಕಾರ್ಯ ನಡೆದಿಲ್ಲ, ಜನತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ, ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾಯ್ದೆಗಳನ್ನು ವಾಪಸ್ ಪಡಯಬೇಕು ಕೃಷಿ ಉತ್ಪನ್ನಗಳಿಗೆ ಶಾಸನಬದ್ದ ಖಾತರಿ ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂಬುದು ರೈತ ಸಂಘಟನೆಗಳು ಒತ್ತಾಯವಾಗಿದೆ.