ರಾಜ್ಯದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ವಿವಾದ ತಾರಕ್ಕೇರಿದೆ. ಸಿಇಟಿಯಲ್ಲಿ 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆ ಕೇಳಿರುವುದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ, ನ್ಯಾಯ ಒದಗಿಸುವಂತೆ ನಿನ್ನೆ ಮಲ್ಲೇಶ್ವರದ ಕೆಇಎ ಕಚೇರಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು, ಪೊಲೀಸರ ವಿರುದ್ಧ ABVP ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಆ ವೇಳೆ ಕೆಲವರನ್ನು ವಶಕ್ಕೂ ಪಡೆಯಲಾಗಿತ್ತು.

ಸಿಇಟಿ ಪರೀಕ್ಷೆ ಗೊಂದಲದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೇಳಿರುವ ವಿಚಾರದ ಬಗ್ಗೆ ವಸ್ತು ಸ್ಥಿತಿ ಪರಿಶೀಲನೆಗೆ ತಜ್ಞರ ಸಮಿತಿ ನೇಮಿಸಿ ಸರ್ಕಾರ ಆದೇಶ ಮಾಡಿತ್ತು. ಏಪ್ರಿಲ್ 18 ಮತ್ತು 19 ರಂದು ನಡೆದ ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಸಂಬಂಧ ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಾಲ್ಕು ವಿಷಯಗಳಿಗೆ 3 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸತ್ಯಾತ್ಯತೆ ಪರಿಶೀಲಿಸಲು KEAಗೆ ತಜ್ಞರ ಸಮಿತಿ ರಚಿಸಲು ಸೂಚಿಸಿ ಆದೇಶ ಹೊರಡಿಸಲಾಗಿತ್ತು.

ಸಿಇಟಿ ಪರೀಕ್ಷೆ ವಿರುದ್ಧ ಶಾಲಾ ಪೋಷಕರ ಸಂಘ, ಉಪನ್ಯಾಸಕರ ಸಂಘದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಪೋಷಕರ ಸಂಘದಿಂದ ಸಿಇಟಿ ಪರೀಕ್ಷೆಯನ್ನೇ ಈ ಬಾರಿ ಕೈಬಿಡಲು ಆಗ್ರಹ ವ್ಯಕ್ತವಾಗಿದೆ. ಸಿಇಟಿ ಪರೀಕ್ಷೆ ಅಂಕಗಳ ಆಧಾರದ ಬದಲು ದ್ವೀತಿಯ ಪಿಯು ಅಂಕಗಳ ಆಧಾರದ ಮೇಲೆ ರ್ಯಾಕಿಂಗ್ ನೀಡುವಂತೆ ಆಗ್ರಹ ಮಾಡಿದ್ದಾರೆ. ಈ ಬಾರಿಯ ಸಿಇಟಿ ಪರೀಕ್ಷೆ ಅಂಕಗಳನ್ನ ಪರಿಗಣಿಸದಂತೆ ಆಗ್ರಹ ವ್ಯಕ್ತವಾಗಿದೆ. ತಕ್ಷಣ ಕೆಇಎ ಕಾರ್ಯ ನಿರ್ವಾಹಕಿ ನಿರ್ದೇಶಕಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಗ್ರೇಸ್ ಮಾರ್ಕ್ಸ್, ಮರು ಪರೀಕ್ಷೆ, ಔಟ್ ಆಫ್ ಸಿಲಬಸ್ ಪ್ರಶ್ನೆ ಕೈಬಿಡೋ ಮೂಲಕ ಸರಿಯಾದ ನ್ಯಾಯ ಒದಗಿಸಲು ಸಾಧ್ಯವಿಲ್ಲ. ತಜ್ಞರ ಸಮಿತಿ ನೇಮಕ ಮಾಡಿದೆ, ತಜ್ಞರ ಸಮಿತಿಯಲ್ಲಿ ಯಾರು ಇದ್ದಾರೆ ಅನ್ನೊದು ಸ್ಪಷ್ಟನೆ ಇಲ್ಲ. ಸರ್ಕಾರದ ಹಂತದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಲು ಒತ್ತಾಯ ಕೇಳಿ ಬಂದಿದೆ. ಸಿಇಟಿ ಪರೀಕ್ಷೆ ವಿರುದ್ಧ ಶಾಲಾ ಪೋಷಕರ ಸಂಘ, ಉಪನ್ಯಾಸಕರ ಸಂಘದಿಂದ ತೀವ್ರ ಅಸಮಾಧಾನ ಕೇಳಿ ಬಂದಿದ್ದು, ಪೋಷಕರ ಸಂಘದಿಂದ ಸಿಇಟಿ ಪರೀಕ್ಷೆಯನ್ನೇ ಈ ಬಾರಿ ಕೈಬಿಡಲು ಆಗ್ರಹ ಮಾಡಲಾಗಿದೆ.

ಸಿಇಟಿ ಔಟ್ ಆಫ್ ಸಿಲಬಸ್ ವಿಚಾರದಲ್ಲಿ ಇಂದು ಶಿಕ್ಷಣ ತಜ್ಞರು ಹಾಗೂ ವಿಷಯ ತಜ್ಞರ ಜೊತೆ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ಎಬಿವಿಪಿ ವಿದ್ಯಾರ್ಥಿ ಸಂಘಟನೆ ಏರ್ಪಡಿಸಿದ್ದ ಸಭೆಯಲ್ಲಿ ವಿಷಯ ತಜ್ಞರು, ಶಿಕ್ಷಣ ತಜ್ಞರು, ಖಾಸಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಲ್ಲೇಶ್ವರಂನಲ್ಲಿ ನಡೆದ ಸಿಇಟಿ ಸಮಾಲೋಚನಾ ಸಭೆಯಲ್ಲಿ ಪರೀಕ್ಷೆಯನ್ನೇ ರದ್ದು ಮಾಡುವಂತೆ ಒತ್ತಾಯ ಕೇಳಿ ಬಂತು.