
ದೆಹಲಿ:“ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಘೋಷಣೆ ಮಾಡಿದ್ದ ರೂ. 5,300 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪೆನ್ನಾರ್ ನದಿಯ ಉಪನದಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎತ್ತಿರುವ ತಕರಾರಿನ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆ ಚರ್ಚೆ ನಡೆಸಲಾಯಿತು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರ ಭೇಟಿ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
“ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ಹಣವನ್ನು ಕಡಿತಗೊಳಿಸಲಾಗುವುದು ಎನ್ನುವ ಸುದ್ದಿಯಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಯಿಲ್ಲ. ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯೋಜನೆಯ ವಿವರಗಳನ್ನು ಕಳುಹಿಸಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ” ಎಂದು ಹೇಳಿದರು.
“ತಮಿಳುನಾಡಿನವರು ಪೆನ್ನಾರ್ ನದಿ ನೀರಿನ ವಿಚಾರವಾಗಿ ಕಳೆದ 2ನೇ ತಾರೀಕಿನಂದು ಅಫಿಡವಿಟ್ ಸಲ್ಲಿಸಿದ್ದಾರೆ. ಮೂರು ವಾರದಲ್ಲಿ ತೀರ್ಮಾನ ಮಾಡಬೇಕಿರುವ ಕಾರಣಕ್ಕೆ ಅಫಿಡವಿಟ್ ಸಲ್ಲಿಕೆ ಮಾಡಲು ತಿಳಿಸಿದ್ದರು. ವಿಧಾನಸಬೆ ಚಳಿಗಾಲದ ಅಧಿವೇಶನವಿದ್ದ ಕಾರಣಕ್ಕೆ ನಮ್ಮಿಂದ ವಿಳಂಬವಾಯಿತು. ನಾವು ದಿನಾಂಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದೇವೆ” ಎಂದರು.
“ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ಮಾತುಕತೆ ನಡೆಸಬೇಕಿರುವ ಕಾರಣಕ್ಕೆ ಶೀಘ್ರದಲ್ಲೇ ಸಭೆಗೆ ಒಂದು ದಿನಾಂಕವನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿದೆ” ಎಂದರು.
“ಈ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ ಕೋಲಾರದ ನೀರಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಅರಿವಿದೆ.ಕೋಲಾರದ ಕೆರೆಗಳಿಗೆ ವೃಷಭಾವತಿ ಸೇರಿದಂತೆ ಕೆ.ಸಿ ವ್ಯಾಲಿ ಯೋಜನೆಯಿಂದ ಬಳಕೆಯಾದ ನೀರನ್ನು ಶುದ್ದೀಕರಿಸಿ ತುಂಬಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿತ್ತು” ಎಂದರು.
“ಪೆನ್ನಾರ್ ನದಿ ನೀರಿನ ವಿವಾದ ಕುರಿತು ಟ್ರಿಬ್ಯೂನಲ್ ಮೂಲಕ ಹೋದರೆ ತಡವಾಗುತ್ತದೆ ಹಾಗೂ ಕೋರ್ಟ್ ಮತ್ತು ವಕೀಲರ ವೆಚ್ಚ ದುಬಾರಿಯಾಗುತ್ತದೆ. ಆದ ಕಾರಣಕ್ಕೆ ಸರ್ಕಾರದ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಾವು ನೋಡುತ್ತಿದ್ದೇವೆ. ಈಗಾಗಲೇ ಅರಣ್ಯ ಇಲಾಖೆಯವರು ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಲು ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಬೇಕಿತ್ತು. ಅವರು ಲಭ್ಯವಿಲ್ಲ.ಇದರ ನಡುವೆ ಇತರೇ ಸಚಿವರನ್ನು ಇನ್ನೊಮ್ಮೆ ಬಂದು ಭೇಟಿಯಾಗುವೆ.ಇಲಾಖೆಯ ಬಜೆಟ್ ಕೆಲಸವಿರುವ ಕಾರಣಕ್ಕೆ ಕೇಂದ್ರ ಜಲಶಕ್ತಿ ಸಚಿವರೂ ಭೇಟಿಗೆ ಸಿಗಲಿಲ್ಲ” ಎಂದು ಹೇಳಿದರು.
“ಕರ್ನಾಟಕಕ್ಕೆ ಸಂಬಂಧಿಸಿದ ನೀರಾವರಿ ಕೆಲಸಗಳು ಹಾಗೂ ಕಡತಗಳು ಸಚಿವರಾದ ವಿ.ಸೋಮಣ್ಣ ಅವರ ಗಮನಕ್ಕೆ ತರಬೇಕು ಎನ್ನುವ ನಿರ್ದೇಶನವಿರುವ ಕಾರಣಕ್ಕೆ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಕೆಲಸಗಳ ಬಗ್ಗೆ ವಿವರಣೆ ನೀಡಿದೆ” ಎಂದು ತಿಳಿಸಿದರು.
ಸುಮಾರು 5-6 ಸಾವಿರ ಉಳಿತಾಯ

ದೆಹಲಿಯಲ್ಲಿ ಘೋಷಣೆ ಮಾಡಿರುವ ಪ್ಯಾರಿ ದೀದಿ ಯೋಜನೆ ಮೂಲಕ ಮಹಿಳೆಯರಿಗೆ 2,500 ನೀಡಲಾಗುವುದು ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಕೇವಲ 2 ಸಾವಿರ ನೀಡಲಾಗುತ್ತಿದೆ ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, “2 ಸಾವಿರ ಎನ್ನವುದು ಕೇವಲವೇ? ದೆಹಲಿ ಹಾಗೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಬೇರೆ, ಬೇರೆಯಿರುತ್ತದೆ. ದೆಹಲಿಯಲ್ಲಿ ಖರ್ಚು ಹೆಚ್ಚು, ಕರ್ನಾಟಕದಲ್ಲಿ ಕಡಿಮೆಯಿದೆ. ಅಲ್ಲದೇ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಮೂಲಕ ಸುಮಾರು 5-6 ಸಾವಿರ ಉಳಿತಾಯ ಪ್ರತಿ ಕುಟುಂಬಕ್ಕೆ ಆಗುತ್ತಿದೆ” ಎಂದರು.
ಕುಮಾರಸ್ವಾಮಿ ಭಂಡಾರದಲ್ಲಿ ಏನೇನಿದೆ.60 ಪರ್ಸೆಂಟ್ ಸರ್ಕಾರ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಭಂಡಾರದಲ್ಲಿ ಏನೇನಿದೆ ಎನ್ನುವ ಬಗ್ಗೆ ಆನಂತರ ಮಾತನಾಡೋಣ. ಈಗ ಚರ್ಚೆ ಮಾಡುವುದು ಬೇಡ” ಎಂದರು.
ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕು ಹಾಕಿಸಿರುವುದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿದೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ. ನನಗೆ ಸಂಬಂಧವಿಲ್ಲದ್ದು ಹಾಗೂ ಗೊತ್ತಿಲ್ಲದೇ ಇರುವ ಬಗ್ಗೆ ಮಾತನಾಡುವುದಿಲ್ಲ. ನನ್ನ ತಮ್ಮ ಡಿ.ಕೆ.ಸುರೇಶ್ ಅವರನ್ನು ಕೂಡ ಭೇಟಿಯಾಗಿಲ್ಲ. ಇದರ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದೇನೆ.ನನ್ನ ತಮ್ಮ ಇದರ ಬಗ್ಗೆ ನಿರ್ಲಕ್ಷ್ಯವಹಿಸಬೇಕಾಗಿತ್ತು.ಆತ ಕೂಡ ವಿದೇಶಕ್ಕೆ ಹೋಗಿದ್ದ ಕಾರಣಕ್ಕೆ ನಾನು ಮಾತನಾಡಲು ಸಾಧ್ಯವಾಗಿಲ್ಲ” ಎಂದರು.