ಕರೋನಾ ಲಸಿಕೆಯ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಮುದ್ರಿಸುವುದನ್ನು ಸರ್ಕಾರವು ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡಿದೆ. ಜನರಲ್ಲಿ ಕರೋನಾ ಕುರಿತು ‘ಜಾಗೃತಿ’ ಮೂಡಿಸುವ ಸಲುವಾಗಿ ಪ್ರಧಾನಿ ಮೋದಿಯ ಚಿತ್ರ ಹಾಗೂ ಅವರ ಹೇಳಿಕೆಯನ್ನು ಮುದ್ರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಲಸಿಕೆಯ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಫೋಟೋ ಬಳಸುವುದು ಸ್ವ-ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಚುನಾವಣೆಗಳ ಸಮಯದಲ್ಲಿ ಪ್ರಚಾರ ಮಾಡುವ ಸಲುವಾಗಿ ಜಾರಿಗೆ ತಂದ ರಾಜಕೀಯ ತಂತ್ರ ಎಂದು ಜರೆದಿದ್ದವು. ಪಂಜಾಬ್, ಜಾರ್ಖಂಡ್ ಛತ್ತೀಸ್ ಘಡ ರಾಜ್ಯಗಳು ತಮ್ಮ ರಾಜ್ಯದಲ್ಲಿ ನೀಡಿದ ಪ್ರಮಾಣಪತ್ರದಿಂದ ಪ್ರಧಾನಿಯವರ ಭಾವಚಿತ್ರವನ್ನು ಅಳಿಸಿದ್ದವು ಕೂಡಾ.

ಈ ವಿಚಾರದ ಕುರಿತಾಗಿ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆಯಾಗಿರುವ ಭಾರತಿ ಪ್ರವೀಣ್ ಪವಾರ್ ಅವರು, ಲಸಿಕೆಯ ನಂತರವೂ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಂದೇಶ ನೀಡುವ ಸಲುವಾಗಿ ಪ್ರಧಾನಿಯವರ ಮಾತುಗಳು ಹಾಗೂ ಅವರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದೆ, ಎಂದು ಹೇಳಿದ್ದಾರೆ.
“ಕರೋನಾ ಸೋಂಕು ಹರಡುತ್ತಿರುವ ವೇಗವನ್ನು ಕುಂಠಿತಗೊಳಿಸಲು ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ. ಈ ಮಾರ್ಗಸೂಚಿನಗಳ ಪಾಲನೆಯನ್ನು ಮಾಡುವಂತೆ ಜನರಿಗೆ ಪುನರ್‌ಮನನ ಮಾಡುವ ಸಲುವಾಗಿ ಪ್ರಧಾನ ಮಂತ್ರಿಯವರ ಭಾವ ಚಿತ್ರ ಹಾಗೂ ಅವರು ಹೇಳಿರುವಂತಹ ಮಾತುಗಳನ್ನು ಮುದ್ರಿಸಲಾಗುತ್ತಿದೆ. ಇದು ಸಾರ್ವಜನಿಕೆ ಹಿತಕ್ಕಾಗಿ ಮಾಡುತ್ತಿರುವಂತದ್ದು,” ಎಂದು ಹೇಳಿದ್ದಾರೆ.
ಈ ರೀತಿ ಜನರಲ್ಲಿ ಅರಿವು ಮೂಡಿಸುವುದು ಸರ್ಕಾರದ ‘ನೈತಿಕ ಕರ್ತವ್ಯ’ ಎಂದು ಭಾರತಿ ಅವರು ಹೇಳಿದ್ದಾರೆ. ಇದರಿಂದಾಗಿ ಜನರಲ್ಲಿ ಶೀಘ್ರವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಕೋವಿಡ್ ಮಾರ್ಗಸೂಚಿಗಳ ಕುರಿತು ಸಂದೇಶ ತಲುಪುತ್ತದೆ ಎಂದು ಉತ್ತರದಲ್ಲಿ ಹೇಳಲಾಗಿದೆ.