ಕೊರೊನಾ ವೈರಸ್ ನಾಲ್ಕನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಸಿಎಂಗಳ ಸಭೆಯಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ ನಂತರ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತು ಎಂದು ವಿಧಾನಸಭೆ ಕಲಾಪದಲ್ಲೇ ತಿರುಗೇಟು ನೀಡಿದ್ದಾರೆ.
ಇಂದು ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, 5 ರಾಜ್ಯಗಳ ಚುನಾವಣೆಗೆ ಮುನ್ನವೇ ಇಂಧನ ಬೆಲೆ ಇಳಿಕೆ ಮಾಡಿ, ಫಲಿತಾಂಶ ಪ್ರಕಟವಾದ ಬಳಿಕ ಮತ್ತೆ ಬೆಲೆ ಏರಿಕೆ ಮಾಡಿದೆ ಇದೇ ದೊಡ್ಡ ಕೇಂದ್ರ ಸರ್ಕಾರದ ನಾಟಕ. ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತುಎಂದು ಕಿಡಿಕಾರಿದ್ದಾರೆ.
ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಕೇಂದ್ರ ಸರಕಾರದ ಸಲಹೆ ಮೇರೆಗೆ ಬಿಜೆಪಿ ಪಕ್ಷ ಆಡಳಿತದಲ್ಲಿರುವ ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿತ್ತು. ಆದರೆ ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ಬಿಜೆಪಿಯೇತರ ಆಡಳಿತ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತ ಮಾಡಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯೇತರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲವು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಇಳಿಸದೇ ಇರುವುದರಿಂದ ತಮ್ಮದೇ ರಾಜ್ಯದ ಜನತೆಗೆ ಬೆಲೆ ಕಡಿತದ ಲಾಭ ದೊರೆಯದಂತೆ ಮಾಡಿವೆ. ಇದರಿಂದ ಬೆಲೆ ಇಳಿಸಿದ ರಾಜ್ಯಗಳಿಗೆ ವಲಸೆ ಹೋಗುವಂತೆ ಆಗಿದೆ. ಇದರಿಂದ ಅಕ್ಕಪಕ್ಕದ ರಾಜ್ಯಗಳಿಗೆ ತೈಲ ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದ್ದರು..