ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯ ಹಿನ್ನೆಲೆಯಲ್ಲಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ ವಿ ಸದಾನಂದ ಗೌಡ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಅದೇ ವೇಳೆ, ಕರ್ನಾಟಕದಿಂದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ, ಚಿತ್ರದುರ್ಗ ಸಂಸದ ಎ ನಾರಾಯಣ ಸ್ವಾಮಿ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತಗೊಂಡಿದೆ.
ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಪ್ರಮುಖ ಸಚಿವರು ಹಾಗೂ ಸಂಭಾವ್ಯ ಸಚಿವರೊಂದಿಗೆ ಪುನರ್‌ರಚನೆಯ ಪೂರ್ವಭಾವಿ ಸಭೆ ನಡೆಯುತ್ತಿದ್ದು, ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ಹಲವು ಸಚಿವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಇವರಲ್ಲಿ ರಾಜ್ಯದ ಡಿವಿ ಸದಾನಂದ ಗೌಡ ಅವರೂ ಸೇರಿದ್ದಾರೆ. ತಾವು ರಾಜೀನಾಮೆ ಸಲ್ಲಿಸಿರುವುದನ್ನು ಸದಾನಂದ ಗೌಡ ಖಚಿತಪಡಿಸಿದ್ದಾರೆ.
ಬೀದರ್ ಸಂಸದ ಭಗವಂತ ಖೂಬಾ ಅವರು ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತಗೊಂಡಿದೆ. ಪ್ರಧಾನಿ ಕಚೇರಿಯಿಂದ ಬುಧವಾರ ಮಧ್ಯಾಹ್ನ ಕರೆ ಬಂದಿದ್ದು, ಕೇಂದ್ರ ಸಂಪುಟ ಸೇರ್ಪಡೆ ಖಾತರಿಯಾಗಿದೆ. ಕರೆ ಬಂದ ಹಿನ್ನೆಲೆಯಲ್ಲಿ, ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಿ ಪ್ರಮಾಣ ವಚನ ಸ್ವೀಕರಿಸಲು ದೆಹಲಿಯತ್ತ ಹೊರಟಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಖಾತೆ ಸಚಿವ ಬಾಬುಲ್ ಸುಪ್ರಿಯೋ, ಶಿಕ್ಷಣ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವೆ ದೇಬಾಶ್ರೀ ಚೌಧ, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ರಾಜ್ಯ ಖಾತೆ ಸಚಿವ ಅಶ್ವಿನಿ ಚೌಬೆ, ಜಲಶಕ್ತಿ ರಾಜ್ಯ ಖಾತೆ ಸಚಿವ ರತನ್ ಲಾಲ್ ಕಠಾರಿಯಾ, ರಾವ್ ಸಾಹೇಬ್ ಧನ್ವೆ ಪಾಟೀಲ್, ಪ್ರತಾಪ್ ಚಂದ್ರ ಸಾರಂಗಿ ಈಗಾಗಲೇ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದಾರೆ.
ಪತ್ರಿಕೋದ್ಯಮಿ ಆಗಿರುವ ರಾಜೀವ್ ಚಂದ್ರಶೇಖರ್ ರವರಿಗೆ ಏಶನಟ್ ಸುವರ್ಣ ನ್ಯೂಸ್ ವಾಹಿನಿಯ ಒಡೆತನವಿದೆ.