ಕೇಂದ್ರ ಮಂತ್ರಿ ಮಂಡಲ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಅವರು ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಮೊದಲನೇ ಬಾರಿಗೆ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಈ ಬಾರಿಯ ವಿಸ್ತರಣೆಯಲ್ಲಿ ಹಲವು ವಿಚಾರಗಳನ್ನು ಗಮನದಲ್ಲಿ ಇರಿಸಲಾಗಿದೆ. ಅತೀ ಹೆಚ್ಚು ಮಹಿಳಾ ಸದಸ್ಯರನ್ನು ಒಳಗೊಂಡ ಕ್ಯಾಬಿನೆಟ್ ಇದಾಗಬಹುದೇ ಎಂಬ ಕುತೂಹಲವು ಉಂಟಾಗಿದೆ.
ಕೇವಲ ಮಹಿಳಾ ಸಂಸದರನ್ನು ಮಾತ್ರವಲ್ಲದೇ, ಜಾತಿ ಆಧಾರಿತವಾಗಿಯೂ ಈ ಬಾರಿಯ ಕ್ಯಾಬಿನೆಟ್ ನಲ್ಲಿ ಮಹತ್ತರವಾದ ಬದಲಾವಣೆಗಳು ಉಂಟಾಗಲಿವೆ. 12 ಪರಿಶಿಷ್ಟ ಜಾತಿ, 8 ಪರಿಶಿಷ್ಟ ಪಂಗಡ ಹಾಗೂ 27 ಇತರೆ ಹಿಂದುಳಿದ ವರ್ಗಗಳ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು CNN News18 ವರದಿ ಮಾಡಿದೆ.
ಒಬಿಸಿಯಲ್ಲಿ ಯಾದವ, ಕುರ್ಮಿ, ದರ್ಜಿ, ಜಾಟ್ ಗುಜ್ಜಾರ್, ಖಂಡಾಯತ್, ಭಂಡಾರಿ, ಬೈರಾಗಿ, ಠಾಕುರ್, ಒಕ್ಕಲಿಗ, ತುಳು ಗೌಡ ಮತ್ತು ಮಲ್ಲಾ ಜಾತಿಗಳ ನಾಯಕರು ಸಚಿವರಾಗಲಿದ್ದಾರೆ. ಐದು ಸ್ಥಾನಗಳು ಅಲ್ಪಸಂಖ್ಯಾತರಿಗೆ ಲಭಿಸಲಿವೆ. ಅದರಲ್ಲಿ ಮುಸ್ಲಿಂ, ಸಿಖ್, ಕ್ರೈಸ್ತ ಧರ್ಮದ ತಲಾ ಒಬ್ಬರು ನಾಯಕರು ಹಾಗೂ ಬೌದ್ದ ಧರ್ಮದ ಇಬ್ಬರು ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಭೂಪೆಂದರ್ ಯಾದವ್, ಅನುರಾಗ್ ಠಾಕುರ್, ಮೀನಾಕ್ಷಿ ಲೇಖಿ, ಅನುಪ್ರಿಯಾ ಪಟೇಲ್, ಅಜಯ್ ಭಟ್, ಶೋಭಾ ಕರಂದ್ಲಾಜೆ, ಸುನಿತಾ ದುಗ್ಗಾ, ಪ್ರೀತಂ ಮುಂಡೆ, ಶಾಂತನು ಠಾಕುರ್, ನಾರಾಯಣ ರಾಣೆ, ಕಪಿಲ್ ಪಾಟಿಲ್, ಪಶುಪತಿ ನಾಥ್ ಪರಾಸ್ ಸೇರಿದಂತೆ ಹಲವು ಪ್ರಮುಖ ನಾಯಕರು ಈಗಾಗಲೇ ಲೋಕ ಕಲ್ಯಾಣ ಮಾರ್ಗ್ ನಲ್ಲಿ ಜಮಾಯಿಸಿದ್ದಾರೆ.
ಒಟ್ಟಿನಲ್ಲಿ ಹಲವು ಹೊಸ ಮುಖಗಳು, ಯುವ ನಾಯಕರು ಈ ಬಾರಿಯ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆಯಲಿದ್ದಾರೆ.