ಕರೋನಾ ಕಾರಣದಿಂದಾಗಿ ಮುಂಗಾರು ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆಗ ಚರ್ಚಿಸಲು ಕರೋನಾ, ಲಾಕ್ಡೌನ್, ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ನಿರುದ್ಯೋಗ ಸಮಸ್ಯೆಯ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ, ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳು ಸೇರಿದಂತೆ ಬಹಳ ವಿಷಯಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆಗಲಿಲ್ಲ. ಈಗ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ. ಅಧಿವೇಶನ ಹೊಸತಾದರೂ ಮೇಲ್ಕಾಣಿಸಿದ ಯಾವ ಸಮಸ್ಯೆಯೂ ಬಗೆಹರಿದಿಲ್ಲ. ಬದಲಿಗೆ ಇನ್ನಷ್ಟು ಜಠಿಲಗೊಂಡಿವೆ. ಹಾಗಾಗಿ ಮುಂಗಾರು ಅಧಿವೇಶನದಲ್ಲಿ ಸಾಧ್ಯವಾಗದ ಸಂಗತಿ ಬಜೆಟ್ ಅಧಿವೇಶನದಲ್ಲಾದರೂ ಸಾಧ್ಯವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಈ ಅಧಿವೇಶನವನ್ನು ಇಂದಿನಿಂದ ಫೆ. 15ರವರೆಗೆ ಮೊದಲ ಹಂತದಲ್ಲಿ ಮತ್ತು ಮಾರ್ಚ್ 8 ರಿಂದ ಏಪ್ರಿಲ್ 8ರವರೆಗೆ ಎರಡನೇ ಹಂತದಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ ನಿಯಮಾವಳಿಗಳಿಗೆ ಬದಲಾವಣೆ ಮಾಡಿ ‘ಶಿಫ್ಟ್’ನಲ್ಲಿ ನಡೆಸಲಿದೆ. ಅಂದರೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ರಾಜ್ಯಸಭೆಯ ಕಲಾಪ ಮತ್ತು ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಲೋಕಸಭೆಯ ಕಲಾಪ. ಹಾಗೆ ನೋಡಿದರೆ ಈ ಅಧಿವೇಶನ ಇನ್ನೂ ಹೆಚ್ಚಿನ ದಿನ ನಡೆಸಬೇಕಿತ್ತು. ಏಕೆಂದರೆ ಇದು ಚಳಿಗಾಲದ ಅಧಿವೇಶನವೂ ಹೌದು ಮತ್ತು ಬಜೆಟ್ ಅಧಿವೇಶನವೂ ಹೌದು. ಆದರೆ ಅಧಿವೇಶನ ನಡೆಯುವ ದಿನಗಳು ಕಡಿಮೆ, ಸಮಯವೂ ಕಡಿಮೆ.
ಹೋಗಲಿ, ಇರುವಷ್ಟು ಸಮಯದಲ್ಲಾದರೂ ಸೂಕ್ತ ವಿಷಯಗಳ ಬಗ್ಗೆ ಸಮರ್ಪಕವಾಗಿ ಚರ್ಚೆ ನಡೆಯಲಿದೆಯೆ? ಆ ಸಾಧ್ಯತೆಗಳೂ ಕಡಿಮೆ. ಉದಾಹರಣೆಗೆ ಮೊದಲ ದಿನ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಮಾಡುವ ಭಾಷಣವನ್ನು ಈಗಾಗಲೇ 16 ವಿಪಕ್ಷಗಳು ಬಹಿಷ್ಕರಿಸಿವೆ. ಕೇಂದ್ರ ಸರ್ಕಾರ ತಾನು ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲು ಮತ್ತು ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಲು ವಿಪಕ್ಷಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸುತ್ತಿವೆ. ಇದಾದ ಬಳಿಕ ಜನವರಿ 30ನೇ ತಾರೀಖು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆದಿರುವ ಸರ್ವ ಪಕ್ಷಗಳ ನಾಯಕರ ಸಭೆಯನ್ನೂ ಬಹಿಷ್ಕರಿಸುವ ಸಾಧ್ಯತೆ ಇದೆ.
ಇದೂ ಆದ ಮೇಲೆ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಇದು ಕರೋನಾ ಹಾಗೂ ಲಾಕ್ಡೌನ್ ನಂತರದ ಮೊದಲ ಬಜೆಟ್ ಆಗಿರುವುದರಿಂದ ಭಾರೀ ಮಹತ್ವ ಪಡೆದುಕೊಂಡಿದೆ. ಆದರೆ ಬಜೆಟ್ ಮಂಡನೆ ವೇಳೆಯೂ ಪ್ರತಿಪಕ್ಷಗಳು ಪ್ರತಿರೋಧ ದಾಖಲಿಸುವ ಸಾಧ್ಯತೆ ಇದೆ. ಹೀಗೆ ಪ್ರತಿಪಕ್ಷಗಳು ಪ್ರತಿಭಟನಾತ್ಮಕ ಧೋರಣೆ ಹೊಂದಿವೆ ಎಂಬ ಮಾತ್ರಕ್ಕೆ ಅವುಗಳನ್ನು ಖಳನಾಯಕನ ಸ್ಥಾನದಲ್ಲಿ ನೋಡಬಾರದು. ಅವು ಇಷ್ಟು ಕಠಿಣವಾಗಲು ಆಡಳಿತ ಪಕ್ಷದ ಹಠಮಾರಿತನವೇ ಪ್ರಮುಖ ಕಾರಣವಾಗಿದೆ.
ಸಕಾರಣ ನೀಡದೆ ಆಡಳಿತ ಪಕ್ಷದ ಮೇಲೆ ಆರೋಪಿಸುವುದು ಕೂಡ ಅಪರಾಧವಾಗಲಿದೆ. ಈಗಾಗಲೇ ‘ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸಲಾಯಿತು’ ಎಂದು ಉಲ್ಲೇಖಿಸಲಾಗಿದೆ. ಏಕೆ? ಆಗ ಏಕಾಏಕಿ ಕೃಷಿ ಮಸೂದೆಗಳನ್ನು ಮಂಡಿಸಿದ ಕೇಂದ್ರ ಸರ್ಕಾರ ಸಮರ್ಪಕವಾಗಿ ಚರ್ಚೆ ನಡೆಸದೆ ಅಂಗೀಕರಿಸಿಕೊಂಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕೋಲಾಹಲವೇ ನಡೆದುಹೋಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ‘ಕೃಷಿ ಮಸೂದೆಗಳ ಬಗ್ಗೆ ನಾಳೆ ಚರ್ಚೆ ಮಾಡೋಣ, ಒಂದು ದಿನದ ಮಟ್ಟಿಗೆ ಮುಂದೂಡಿ’ ಎಂದಷ್ಟೇ ಕೇಳಿಕೊಂಡಿದ್ದವು. ಸದನ ನಡೆಸಬೇಕಾದ ಜವಾಬ್ದಾರಿಯುಳ್ಳ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಹಾಗೆ ಮಾಡದ ಕಾರಣ ರಾಜ್ಯಸಭೆಯ ಕಲಾಪ ಸಂಪೂರ್ಣವಾಗಿ ಹಾಳಾಯಿತು.
ಬಜೆಟ್ ಅಧಿವೇಶನದಲ್ಲಿ ಹಾಗೆ ಆಗುವುದಿಲ್ಲ ಎಂದು ಹೇಳಲು ಯಾವ ಗ್ಯಾರಂಟಿಯೂ ಗೋಚರಿಸುತ್ತಿಲ್ಲ. ಮೇಲಾಗಿ ಆಡಳಿತಾರೂಢ ಪಕ್ಷಕ್ಕೆ ‘ನಿಯಮಾವಳಿಗಳ ಪ್ರಕಾರ ವರ್ಷದ ಮೊದಲ ಜಂಟಿ ಸದನ ನಡೆಸಬೇಕು, ರಾಷ್ಟ್ರಪತಿಗಳಿಂದ ಭಾಷಣ ಮಾಡಿಸಬೇಕು, ಬಜೆಟ್ ಮಂಡಿಸಬೇಕು, ಅದಕ್ಕೆ ಸದನದ ಒಪ್ಪಿಗೆ ಪಡೆದುಕೊಳ್ಳಬೇಕು ಹಾಗೂ ಈ ನಡುವೆ ತಾನು ತಂದಿರುವ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಬೇಕು’ ಎಂಬಷ್ಟೇ ಉದ್ದೇಶಗಳು ಇರುವಂತೆ ಕಾಣುತ್ತಿದೆ. ಹಾಗಾಗಿ ಈ ಅಧಿವೇಶನ ನೆಪಮಾತ್ರಕ್ಕೆ ನಡೆಯುವ ಸಾಧ್ಯತೆಯೇ ಹೆಚ್ಚು. ಆದರೆ ಹಾಗಾಗದಿರಲಿ.
ಈಗಲೂ ಕರೋನಾ, ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ನಿರುದ್ಯೋಗ ಸಮಸ್ಯೆಯ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ, ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ವಿಷಯಗಳ ಬಗ್ಗೆ ಸಮರ್ಪಕ ಚರ್ಚೆಯಾಗಬೇಕಿದೆ. ಈಗಾಗಲೇ ಕಾಂಗ್ರೆಸ್ ಗಣರಾಜ್ಯೋತ್ಸವದ ದಿನ ದೆಹಲಿಯ ಕೆಂಪು ಕೋಟೆಗೆ ಲಗ್ಗೆ ಹಾಕಲು, ಭಾವುಟ ಹಾರಿಸಲು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ದೆಹಲಿ ಪೊಲೀಸರು ಬಿಟ್ಟಿದ್ದೇಕೆ? ಇದು ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವೇ ಕೆಲವರನ್ನು ಪ್ರತಿಭಟನಾ ಮೆರವಣಿಗೆಗೆ ಕಳಿಸಿ ನಡೆಸಿರುವ ಕುಕೃತ್ಯ. ಇದನ್ನು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದೆ. ಇಂಥ ವಿಷಯಗಳು ಚರ್ಚೆ ಆಗಬೇಕಿದೆ.