ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡಿಸಿದ್ದು, ಈ ಕುರಿತು ರಾಜ್ಯ ಸರ್ಕಾರ ಅನೇಕ ಸಚಿವರು ಮತ್ತು ಬಿಜೆಪಿ ಶಾಸಕರು ಮತ್ತು ಸಂಸದರು ಸಂತಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಸಂತಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ. ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಎಂದು ಹೇಳಿದರು.
ಬಜೆಟ್ ಕುರಿತು ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅನೇಕ ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡುತ್ತಿದ್ದೆವು. ನದಿ ಜೋಡಣೆ ಯೋಜನೆ ಘೋಷಣೆ ಮೂಲಕ 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಎಸ್ಸಿ, ಎಸ್ಟಿ, ಬಡ ರೈತರಿಗೆ ನೀರಾವರಿ ಸೌಲಭ್ಯ ಕೊಟ್ಟಿದ್ದಾರೆ. 400 ಹೊರ ರೈಲು ಮಾರ್ಗಗಳನ್ನು ಘೋಷಣೆ ಮಾಡಿದ್ದಾರೆ. ಸೋಲಾರ್ ವಿದ್ಯುತ್ ಯೋಜನೆಗೆ ಒತ್ತು ನೀಡಿದ್ದಾರೆ. 80 ಲಕ್ಷ ಮನೆ ಕೊಡುವ ಯೋಜನೆ ರೂಪಿಸಿದ್ದಾರೆ. ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಬಜೆಟ್ ಕುರಿತು ಸಿಸಿ ಪಾಟೀಲ್ ಮಾತನಾಡಿದ್ದು, 2022ರ ಬಜೆಟ್ ಐತಿಹಾಸಿಕ ಬಜೆಟ್ ಎಂದು ವರ್ಣಿಸಿದ ಅವರು, ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಯೋಜನೆಗೆ ಹಣ ಬಿಡುಗಡೆಯಾಗಿದೆ. ಬಡವರ ಅನುಕೂಲಕ್ಕೆ 400 ರೈಲು ಘೋಷಣೆ ಮಾಡಲಾಗಿದೆ. ರೈತರಿಗೆ ಬೆಲೆ ಬಿದ್ದ ಸಂದರ್ಭದಲ್ಲಿ ಉತ್ತೇಜನ ನೀಡಲು ಹಣ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ಬಜೆಟ್ ಕುರಿತು ಸಂಸ ತೇಜಸ್ವಿ ಸೂರ್ಯ ಮಾತನಾಡಿ, ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಿದೆ. ರೈತರು, ಗ್ರಾಮೀಣಭಾಗ, ಸ್ಟಾರ್ಟ್ಅಪ್ ಸೇರಿ ಎಲ್ಲಾ ವಿಭಾಗಳಿಗೂ ಬಜೆಟ್ ಸ್ಪರ್ಷ ಆಗಿದೆ. ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಒಂದು ಸ್ಕೀಂ ಅಂತಾ ಘೋಷಣೆ ಮಾಡಲ್ಲ. ಆದರೆ ಮೂಲಸೌರ್ಯ ಹೆಸರಲ್ಲಿ ಎಲ್ಲಾ ರಾಜ್ಯಗಳ ಯೋಜನೆಗಳಿಗೆ ಹಣ ಸಿಗುತ್ತೆ ಎಂದು ಹೇಳಿದ್ದಾರೆ.












