ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ವಿರುದ್ಧದ ಪಾಕ್ ಗೆಲುವಿನ ಸಂಭ್ರಮ ಪಡುವುದು ದೇಶದ್ರೋಹದ ಅಡಿಯಲ್ಲಿ ಒಳಪಡುವುದಿಲ್ಲ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶ ದೀಪಕ್ ಗುಪ್ತಾ ಹೇಳಿದ್ದಾರೆ.
ದಿ ವೈರ್ ಸಂಸ್ಥೆಗೆ ಕರಣ್ ಥಾಪರ್ ಮಾಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ʼಖಂಡಿತವಾಗಿಯೂ ಇದು ದೇಶದ್ರೋಹವಲ್ಲ, ಇದು ದೇಶದ್ರೋಹವಾಗಿರಬಹುದು ಎಂದು ಯೋಚಿಸುವುದು ಕೂಡಾ ಹಾಸ್ಯಾಸ್ಪದ ಸಂಗತಿ. ನ್ಯಾಯಾಲಯದಲ್ಲಿ ಅಪರಾಧವಾಗಿ ಎಂದಿಗೂ ನಿಲ್ಲದ ಇಂತಹ ಪ್ರಕರಣಗಳಿಗಾಗಿ ಜನರನ್ನು ನ್ಯಾಯಾಲಯದ ಎದುರು ಆರೋಪಿಗಳಂತೆ ನಿಲ್ಲಿಸುವುದಕ್ಕಿಂತ ಮಾಡಲು ಬೇರೆ ಹಲವಾರು ಕೆಲಸಗಳಿವೆ. ಇದು ಸಾರ್ವಜನಿಕ ಸಮಯ ಮತ್ತು ಹಣವನ್ನು ಪೋಲು ಮಾತ್ರ ಮಾಡುತ್ತದೆʼ ಎಂದು ಅವರು ಹೇಳಿದ್ದಾರೆ.
ಹಲವಾರು ಮಂದಿಗೆ ಇದು ಆಕ್ಷೇಪಾರ್ಹವೆನಿಸಬಹುದು, ಆದರೂ ಇದೊಂದು ಅಪರಾಧ ಕೂಡಾ ಅಲ್ಲ ಎನ್ನುವುದು ವಾಸ್ತವ ಎಂದು ಅವರು ಹೇಳಿದ್ದಾರೆ.
“ಕಾನೂನುಬದ್ದ ಕಾರ್ಯಗಳೆಲ್ಲಾ ʼನೈತಿಕ ಅಥವ ಉತ್ತಮʼ ಕಾರ್ಯವಾಗಿ ಇರಲೇಬೇಕು ಎಂದೇನಿಲ್ಲ. ಮತ್ತು ಎಲ್ಲಾ ʼಅನೈತಿಕʼ ಕಾರ್ಯಗಳು ಕಾನೂನು ಬಾಹಿರವಾಗಿರಬೇಕು ಎಂದಿಲ್ಲ. ಅದೃಷ್ಟವಶಾತ್ ನಮ್ಮ ಸರ್ಕಾರವು ಕಾನೂನಿಂದ ಆಳುತ್ತದೆಯೇ ವಿನಃ, ನೈತಿಕತೆಯ ನಿಯಮಗಳಿಂದ ಆಳುವುದಿಲ್ಲ. ನೈತಿಕತೆಯು ಬೇರೆ ಬೇರೆ ಸಮಾಜಗಳಲ್ಲಿ, ಬೇರೆ ಬೇರೆ ಕಾಲಘಟ್ಟದಲ್ಲಿ ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ” ಎಂದು ದೀಪಕ್ ಗುಪ್ತಾ ಹೇಳಿದ್ದಾರೆ.
ಬಲ್ವಂತ್ ಸಿಂಗ್ ಹಾಗೂ ಪಂಜಾಬ್ ಸರ್ಕಾರದ ನಡುವಿನ ಪ್ರಕರಣವನ್ನು ಉಲ್ಲೇಖಿಸಿದ ಜಸ್ಟೀಸ್ ಗುಪ್ತಾ, ಈ ಪ್ರಕರಣದಲ್ಲಿ ʼಖಾಲಿಸ್ತಾನ್ ಝಿಂದಾಬಾದ್ʼ ಅಂತ ಕೂಗಿರುವುದನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಘೋಷಣೆಯಲ್ಲಿ ಯಾವುದೇ ರೀತಿಯ ಹಿಂಸಾಚಾರದ ಅಥವಾ ದೊಂಬಿಯ ಉದ್ದೇಶವಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿತ್ತು.
ಇದೇ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಜಸ್ಟೀಸ್ ಗುಪ್ತಾ, ಪಾಕಿಸ್ತಾನ ವಿಜಯವನ್ನು ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಕಛೇರಿ ಮಾಡಿದ ಘೋಷಣೆಯು ಈ ನೆಲದ ಕಾನೂನಿಗೆ ವಿರುದ್ಧವಾಗಿರುವುದು ಹಾಗೂ ಜವಾಬ್ದಾರಿಯುತವಾದುದಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಅವರು ದೇಶದ್ರೋಹ ಪ್ರಕರಣಗಳಲ್ಲಿ ಬಂದಿರುವ ತೀರ್ಪುಗಳನ್ನು ಗಮನಿಸಿದ್ದರೆ ಮುಖ್ಯಮಂತ್ರಿಗೆ ಇಂತಹ ಹೇಳಿಕೆ ನೀಡದಂತೆ ಸಲಹೆ ನೀಡುತ್ತಿದ್ದರು. (ಬಲ್ವಂತ್ ಸಿಂಗ್) ಪ್ರಕರಣದ ಕುರಿತು ಅವರು ಅರಿತಿದ್ದಾರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಇದಕ್ಕೆ ಬೆಂಬಲಿಸದರಿಬಹುದು ಆದರೂ, ಪಂದ್ಯಾಟದ ವೇಳೆ ಇನ್ನೊಂದು ಬದಿಯ ತಂಡಕ್ಕೆ ನಾವು ಯಾಕೆ ಬೆಂಬಲಿಸಬಾರದು? ಭಾರತೀಯ ಮೂಲದ ಅನೇಕ ಯುಕೆ ಅಥವಾ ಆಸ್ಟ್ರೇಲಿಯನ್ ಪ್ರಜೆಗಳು ಭಾರತದ ತಂಡಕ್ಕೆ ಜಯಘೋಷ ಕೂಗುತ್ತಾರೆ, ಆಗ ಅವರ ಮೇಲೆ ದೇಶದ್ರೋಹದಂತಹ ಪ್ರಕರಣಗಳು ದಾಖಲಿಸಿದರೆ ನಮ್ಮ (ಭಾರತೀಯರ) ಪ್ರತಿಕ್ರಿಯೆಗಳು ಹೇಗಿರಬಹುದು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ದೇಶದ್ರೋಹ ಕಾನೂನನ್ನು ವಿಮರ್ಶಿಸುವ ಅಗತ್ಯವಿದೆ ಎಂದು ನನಗನ್ನಿಸುತ್ತದೆ. ಪೊಲೀಸರು ಮತ್ತು ರಾಜಕಾರಣಿಗಳು ಈ ಕಾಯ್ದೆಯನ್ನು ದುರುಪಯೋಗಪಡಿಸುತ್ತಿದ್ದಾರೆ. ಹಾಗಾಗಿ, ಈ ಕಾಯ್ದೆಯ ಮಿತಿಗಳೇನು ಎನ್ನುವುದನ್ನು ವಿಶ್ಲೇಷಿಸಬೇಕಾದ ಅಗತ್ಯ ಇದೆ, ಇದಕ್ಕೆ ಸುಪ್ರೀಂ ಕೋರ್ಟ್ ಮುಂದಡಿಯಿಡಬೇಕು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್‌ವಿ ರಮಣ ಕೂಡಾ ದೇಶದ್ರೋಹ ಪ್ರಕರಣದ ಪ್ರಸ್ತುತ ಅನಿವಾರ್ಯತೆಯನ್ನು ಪ್ರಶ್ನಿಸಿದ್ದರು. ವಸಾಹತು ಶಾಹಿ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಲು ಈ ಕಾನೂನನ್ನು ರಚಿಸಲಾಗಿತ್ತು. ಇಂತಹ ಕಾನೂನು ಈ ಕಾಲಕ್ಕೆ ಅಗತ್ಯವಿದೆ ಅಂತ ಅನಿಸುತ್ತಿಲ್ಲ ಎಂದು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಪಾಕ್ ವಿಜಯ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಪ್ರಕರಣಗಳು ಸಮರ್ಥನೀಯವಲ್ಲ ಎಂದಿರುವ ಜಸ್ಟೀಸ್ ಗುಪ್ತಾ, ಧಾರ್ಮಿಕ ಆಧಾರದ ಮೇಲೆ ಧ್ವೇಷ ಸಾಧಿಸುವುದು ಎಂದು ಪ್ರಕರಣ ದಾಖಲಾಗಿದೆ. ಆ ವಿದ್ಯಾರ್ಥಿಗಳು ಹಿಂದೂ ಧರ್ಮದ ವಿರುದ್ಧ ಏನಾದರೂ ಧ್ವೇಷಪೂರಿತ ಹೇಳಿಕೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಹಾಗಂತ ಪಾಕ್ ಗೆಲುವನ್ನು ಸಂಭ್ರಮಿಸಲು ನಾನು ಬೆಂಬಲಿಸುತ್ತಿಲ್ಲ. ಪಾಕ್ ಹಾಗೂ ಭಾರತ ನಡುವಿನ ಸಂಬಂಧ ಗಮನಿಸಿದರೆ ಇದು ಬುಧ್ಧಿವಂತಿಕೆಯ ಲಕ್ಷಣವಲ್ಲ. ಹಾಗೆಂದು ಇದೊಂದು ಅಪರಾಧವೂ ಅಲ್ಲ ಎಂದು ಜಸ್ಟೀಸ್ ಗುಪ್ತಾ ಹೇಳಿದ್ದಾರೆ.