ಕಲ್ಲಿದ್ದಲು ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯ ಪತ್ನಿಗೆ ಸಿಬಿಐ ಸಮನ್ಸ್ ನೀಡಿದೆ.
ಸಿಬಿಐ ಯ ಒಂದು ತಂಡ ಅಭಿಷೇಕ್ ಬ್ಯಾನರ್ಜಿಯ ಮನೆಗೆ ತೆರಳಿ ಅವರ ಪತ್ನಿಗೆ ವಿಚಾರಣೆಯಲ್ಲಿ ಭಾಗಿಯಾಗುವಂತೆ ನೋಟೀಸ್ ನೀಡಿದೆ.
ಅಭಿಷೇಕ್ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾಗೆ ಸಮನ್ಸ್ ಬಂದ ಬೆನ್ನಲ್ಲೆ, ಬ್ಯಾನರ್ಜಿಯ ಪತ್ನಿಯ ವಿರುದ್ಧ ಸಮನ್ಸ್ ಬಂದಿರುವುದು ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ(ಸಂಸದ /ಶಾಸಕ) ವಿಶೇಷ ನ್ಯಾಯಾಲಯವು ಫೆಬ್ರವರಿ 22 ರಂದು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ಅಮಿತ್ ಶಾಗೆ ಸಮನ್ಸ್ ನೀಡಿತ್ತು.
ಕಲ್ಲಿದ್ದಲು ಕಳ್ಳ ಸಾಗಣಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿಯ ಪತ್ನಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿರುವುದು ಇದೇ ಮೊದಲು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರಗಳಲ್ಲಿ ಸಿಬಿಐ ಪಶ್ಚಿಮ ಬಂಗಾಳದ ಅನೇಕ ಕಡೆಗಳಲ್ಲಿ ವಿಚಾರಣೆ ನಡೆಸಿದೆ. ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳ 13 ಸ್ಥಳಗಳಲ್ಲಿ ಸಿಬಿಐ ಶೋಧಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.