ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸುವ ಭಯೋತ್ಪಾದಕರನ್ನು ನಿಭಾಯಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಗಡಿಗಳಿಗೆ ಕಳುಹಿಸಬೇಕು ಎಂದು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಬಿಜೆಪಿ ವಿರುದ್ಧದ ಇತ್ತೀಚಿನ ವಾಗ್ದಾಳಿಯಲ್ಲಿ ಹೇಳಿದೆ.
ದೆಹಲಿ ಬಳಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಸರ್ಕಾರ ನಡೆಸುತ್ತಿರುವ ಬಲಪ್ರಯೋಗವನ್ನು ಟೀಕಿಸಿದೆ. ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ, ಬಿಜೆಪಿ ನಿರಂಕುಶಾಧಿಕಾರವನ್ನು ಆಹ್ವಾನಿಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ “ಸಾಮ್ನಾ” ದ ಸಂಪಾದಕೀಯದಲ್ಲಿ ಆರೋಪಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಬಿಜೆಪಿ ಕೇವಲ ದೇಶದ ಪರಿಸರವನ್ನು ಹಾಳು ಮಾಡುತ್ತಿಲ್ಲ , ಜೊತೆಗೆ ನಿರಂಕುಶಾಧಿಕಾರವನ್ನು ಆಹ್ವಾನಿಸುತ್ತಿದೆ. ಖಾಲಿಸ್ತಾನ್ ವಿಷಯವು ಮುಗಿದಿದೆ, ಅದಕ್ಕಾಗಿ ಇಂದಿರಾ ಗಾಂಧಿ ಮತ್ತು ಜನರಲ್ ಅರುಣ್ ಕುಮಾರ್ ವೈದ್ಯ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಆದರೆ ಬಿಜೆಪಿ ಆ ವಿಷಯವನ್ನು ಮತ್ತೆ ಕೆದಕಿ ಪಂಜಾಬ್ನಲ್ಲಿ ರಾಜಕೀಯ ಮಾಡಲು ಬಯಸಿದೆ, ಇದು ಕಿಡಿಯನ್ನು ಹೊತ್ತಿಸಿದರೆ ಅದು ದೇಶಕ್ಕೆ ಹಾನಿಕಾರಕವಾಗಿರಲಿದೆ” ಎಂದು ಶಿವಸೇನಾ ಸಂಪಾದಕೀಯ ಎಚ್ಚರಿಸಿದೆ.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯ ಸರ್ಕಾರವನ್ನು ಗುರಿಯಾಗಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಲಾಗಿದೆ ಎಂದು ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಾಮ್ನಾ ಸಂಪಾದಕೀಯವು, “ಸರ್ಕಾರವು ವಿರೋಧವನ್ನು ತಡೆಯಲು ಯೋಚಿಸುತ್ತದೆ, ಅದು ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ) ಅನ್ನು ಬಳಸಿ ಪ್ರತಿಪಕ್ಷಗಳ ನಿಗ್ರಹಕ್ಕೆ ಮುಂದಾಗಿವೆ. ಆದ್ದರಿಂದ ಈ ಏಜೆನ್ಸಿಗಳಿಗೆ ಅವರ ಶೌರ್ಯವನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು. ಪ್ರತಿ ಬಾರಿ ಗುಂಡುಗಳು ಕೆಲಸ ಮಾಡುವುದಿಲ್ಲ. ಭಯೋತ್ಪಾದಕರು ಜಮ್ಮು ಕಾಶ್ಮೀರ ಗಡಿಗೆ ಪ್ರವೇಶಿಸುತ್ತಿರುವಾಗ ದೆಹಲಿಯ ಗಡಿಯಲ್ಲಿ ನಮ್ಮ ರೈತರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ಇಂತಹ ಸಮಯದಲ್ಲಿ, ಇಡಿ ಮತ್ತು ಸಿಬಿಐ ಅನ್ನು ಗಡಿಗಳಿಗೆ ಕಳುಹಿಸಬೇಕು. ಬೇರೆ ಆಯ್ಕೆಗಳಿಲ್ಲ” ಎಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ತನ್ನ ಶಾಸಕ ಪ್ರತಾಪ್ ಸರ್ನಾಯಕ್ ಅವರನ್ನು ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಶಿವಸೇನೆ ಆರೋಪಿಸಿದೆ.