-ಕೃಷ್ಣಮಣಿ
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷರ ಅವಧಿ ಇಂದಿಗೆ ಮುಕ್ತಾಯ ಆಗಲಿದ್ದು, ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸದಸ್ಯರೊಂದಿಗೆ ಸೇರಿಕೊಂಡು ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಸಲಿದ್ದಾರೆ. ಸರ್ಕಾರಕ್ಕೆ ಜಾತಿಗಣತಿ ಸಮೀಕ್ಷೆ ವರದಿ ಸಲ್ಲಿಸಲಿರುವ ಜಯಪ್ರಕಾಶ್ ಹೆಗ್ಡೆ, 2015ರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವರದಿ ಸಿದ್ದವಾಗಿದ್ದು, ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಇಂದು ಜಾತಿಗಣತಿ ವರದಿ ಸಲ್ಲಿಕೆ ಆಗಲಿದೆ. ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಗಣತಿಗೆ ಸೂಚನೆ ನೀಡಿದ್ದರು. ಆದರೆ ಕಾಂತರಾಜು ಆಯೋಗ ಜಾತಿಗಣತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು, ಅದೇ ಮಾಹಿತಿ ಮೇರೆಗೆ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಂಕಿ ಅಂಶಗಳ ಮೇಲೆ ಅಧ್ಯಯನ ವರದಿ ಸಲ್ಲಿಸಲಿದ್ದಾರೆ. ಸರ್ಕಾರಕ್ಕೆ ಸಾಕಷ್ಟು ಮಾಹಿತಿ ಸಿಗಲಿದ್ದು, ಹಿಂದುಳಿದ ಜಾತಿಗಳ ಶ್ರೇಯೋಭಿವೃದ್ದಿ ಅನುಕೂಲ ಆಗಲಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದತ್ತಾಂಶ ಸಂಗ್ರಹಿದೆ. ಸಮೀಕ್ಷೆ ಆಧಾರದ ಮೇಲೆ ಸರ್ಕಾರ ಸೌಲಭ್ಯ ನೀಡಲು ಅನುಕೂಲಕರ ಎನ್ನಲಾಗ್ತಿದೆ. ಜಾತಿವೊಂದೇ ಅಲ್ಲದೆ 54 ಅಂಶಗಳನ್ನು ಆಧರಿಸಿ ಅಧ್ಯಯನ ಮಾಡಲಾಗಿದೆ. ಅದರಲ್ಲಿ ಜಾತಿ ಕೂಡ ಒಂದು ಅಂಶ ಮಾತ್ರ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಜಾತಿಗಣತಿ ವೈಜ್ಞಾನಿಕವಾಗಿಲ್ಲ ಎಂದು ಈಗಾಗಲೇ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ಕಿಡಿಕಾರಿದ್ದು, ವರದಿ ಬಿಡುಗಡೆ ಬಳಿಕ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಜಾತಿಗಣತಿಗೆ ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ತೀವ್ರ ವಿರೋಧ ಮಾಡಿರುವ ಕಾರಣಕ್ಕೆ ಜಾತಿ ಗಣತಿ ಸ್ವೀಕಾರ ಆದರೂ ಬಿಡುಗಡೆ ಆಗಲ್ಲ ಅನ್ನೋ ಮಾಹಿತಿ ಹರಿದಾಡುತ್ತಿದೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗಲಿದ್ದು, ಒಂದು ವೇಳೆ ಜಾತಿಗಣತಿ ಬಿಡುಗಡೆ ಆಗಿ, ಒಕ್ಕಲಿಗ ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಂಡರೆ ಕಾಂಗ್ರೆಸ್‌ಗೆ ನಷ್ಟ ಅನ್ನೋ ಲೆಕ್ಕಾಚಾರವಿದೆ. ಇದೇ ಕಾರಣಕ್ಕೆ ಜಾತಿ ಗಣತಿಯನ್ನು ಸ್ವೀಕಾರ ಮಾಡುವಂತೆ ಹಲವಾರು ಸಂಘ ಸಂಸ್ಥೆಗಳು ಆಗ್ರಹ ಮಾಡಿರುವ ಕಾರಣಕ್ಕೆ ವರದಿ ಸ್ವೀಕಾರ ಮಾಡಿ ಸುಮ್ಮನಾಗ್ತಾರೆ ಎನ್ನಲಾಗ್ತಿದೆ.
ಜಯಪ್ರಕಾಶ್ ಹೆಗ್ಡೆ ನೀಡುವ ವರದಿ ಮೇಲೆ ಸಮಿತಿ ರಚನೆ ಮಾಡಿ ಅಧ್ಯಯನಕ್ಕೆ ಸೂಚಿಸುವ ಮೂಲಕ ಕಾಲಹರಣ ಮಾಡುವುದು ಕಾಂಗ್ರೆಸ್ ಸರ್ಕಾರ ನಿರ್ಧಾರ. ಪುನರ್ ಪರಿಶೀಲನೆ ಸಮಿತಿ ರಚನೆ ಮಾಡಿ ಆಯೋಗದ ವರದಿ ಪುನರ್ ಪರಿಶೀಲನೆ ಸಮಿತಿ ಮೂಲಕ ಪರಾಮರ್ಶೆ ವರದಿ ಪಡೆಯುವುದು. ಲೋಕಸಭೆ ಚುನಾವಣೆ ಬಳಿಕ ಪುನರ್ ಪರಿಶೀಲನೆ ಸಮಿತಿ ವರದಿ ಪಡೆದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚೆ ಮಾಡುವುದು. ಆ ಬಳಿಕ ಸದನದಲ್ಲಿ ಮಂಡಿಸುವ ಬಗ್ಗೆ ನಿರ್ಧಾರ ಮಾಡೋಣ. ಸದ್ಯಕ್ಕೆ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ ಎಂದು ಸಿದ್ದರಾಮಯ್ಯ ಆಪ್ತರ ಬಳಿ ಹೇಳಿದ್ದಾರೆ ಎನ್ನುವುದು ವಿಧಾನಸೌಧದಿಂದ ಸಿಕ್ಕಿರುವ ಖಚಿತ ಮಾಹಿತಿ.