ರಾಜ್ಯ ಸರ್ಕಾರದ ಮಹತ್ವದ ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಗೆ ಸ್ವತಃ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ತಿರಸ್ಕರಿಸಲು ಒಕ್ಕಲಿಗರ ಸಂಘ ಸಲ್ಲಿಸಿದ ಮನವಿ ಪತ್ರಕ್ಕೆ ಸಹಿ ಹಾಕಿ ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿಸಿದೆ. ಆದರೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಜಾರಿ ಮಾಡುವುದು ಅಚಲವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು, ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿಗೆ ಡಿಕೆಶಿಯಿಂದಲೇ ವಿರೋಧ
ಕಾಂತರಾಜು ವರದಿ ತಿರಸ್ಕರಿಸುವ ಸಂಬಂಧ ಒಕ್ಕಲಿಗರ ಸಂಘ ಮನವಿ ಪತ್ರವನ್ನು ಸಿದ್ಧಪಡಿಸಿತ್ತು. ಇದಕ್ಕೆ ಈಗ ಡಿ.ಕೆ. ಶಿವಕುಮಾರ್ ಅವರ ಸಹಿಯನ್ನು ಪಡೆದುಕೊಳ್ಳಲಾಗಿದ್ದು, ಆ ಪತ್ರವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಲಾಗಿದೆ. ಇದರ ಮನವಿ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಲ್ಲಿಸಲಾಗಿದೆ.
ಈ ಮನವಿ ಪತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಎಚ್ ಡಿ ಕುಮಾರಸ್ವಾಮಿ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಡಿಸಿಎಂ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಒಕ್ಕಲಿಗ ಸಮುದಾಯದ ಹಲವು ಶಾಸಕರು ಸಹಿ ಹಾಕಿದ್ದಾರೆ.