ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಆರೋಪಿಗಳು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಕಿಡಿಗೇಡಿ ರಾಕೇಶ್ ಕಿಶೋರ್ ಎಂಬ ವಕೀಲನ ದುಷ್ಕೃತ್ಯವನ್ನು ಸಮರ್ಥಿಸುವುದರ ಜೊತೆಗೆ ಸಿಜೆಐ ಬಗ್ಗೆ ಅವಹೇಳನಕಾರಿ ಮತ್ತು ಬೆದರಿಕೆಯ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದರು. ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯಕ್ ಮತ್ತು ಮಂಜುನಾಥ್ ಎಂಸಿ ಮಂಜು ಎಂಬ ವ್ಯಕ್ತಿಗಳ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67, 66 ಮತ್ತು 66 (ಸಿ) ಅಡಿಯಲ್ಲಿ ಸೈಬರ್ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ದಲಿತ ನಾಯಕ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಠಾವಳೆ, ಈ ಘಟನೆ ಖಂಡನೀಯ ಎಂದು ಹೇಳಿದರು. “ಸಿಜೆಐ ಮೇಲೆ ಇಂತಹ ದಾಳಿ ನಡೆದಿರುವುದು ಇದೇ ಮೊದಲು. ಭೂಷಣ್ ಗವಾಯಿ ದಲಿತ ಸಮುದಾಯದವರು, ಮತ್ತು ಅವರು ಸ್ವಂತ ಅರ್ಹತೆಯ ಮೇಲೆ ತಮ್ಮ ಸ್ಥಾನವನ್ನು ಸಾಧಿಸಿದ್ದಾರೆ. ಕೆಲವು ಮೇಲ್ಜಾತಿ ಸಮುದಾಯದ ಸದಸ್ಯರಿಗೆ ಈ ಸಂಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಚಿವರು ಹೇಳಿದರು.

ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್ ಒಳಗೆ ಸಿಜೆಐ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ ಶೂ ಎಸೆಯಲು ಯತ್ನಿಸಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಸಂಘ ಗುರುವಾರ ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿತ್ತು.