
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಜೆ ಭಾರೀ ಸ್ಫೋಟ ಉಂಟಾಗಿ ಕೆಂಪು ಕೋಟೆ (Red Fort) ಬಳಿಯ ಮೆಟ್ರೋ ನಿಲ್ದಾಣದ ಗೇಟ್ ಬಳಿ ನಿಲ್ಲಿಸಿದ್ದ ಕಾರು ಸ್ಫೋಟವಾಗಿದೆ. ಇದರಿಂದ ಒಂಬತ್ತು ಜನರು ಮೃತಪಟ್ಟಿದ್ದಾರೆ. ಸುತ್ತಲೂ ಬೆಂಕಿ ಆವರಿಸಿದ್ದರಿಂದ ಹಲವು ಜನರು ಗಾಯಗೊಂಡಿದ್ದಾರೆ. ಇದರಿಂದ ದೆಹಲಿಯಲ್ಲಿ (Delhi) ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ..

ದೆಹಲಿಯ ಸಂಸತ್ ಭವನ, ಇಂಡಿಯಾ ಗೇಟ್ ಸುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಚಾಂದನಿಚೌಕ್ ಮಾರ್ಕೆಟ್, ಕೆಂಪು ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ದೆಹಲಿ ಪೊಲೀಸರು ಬಂದ್ ಮಾಡಿದ್ದಾರೆ. ಇಂದು ಸಂಜೆ 6.55ರ ಸುಮಾರಿಗೆ ಕಾರು ಸ್ಫೋಟವಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ನಂತರ 7 ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಯಿತು.

ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಬಂದಿದ್ದು, ನಂತರ ಹತ್ತಿರದ 3ರಿಂದ 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ತಕ್ಷಣವೇ ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸಿಎನ್‌ಜಿ ಸಿಲಿಂಡರ್ ಸ್ಫೋಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.



