ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್, “ಆರ್ಎಸ್ಎಸ್ ಕಾರ್ಯಸೂಚಿಯ ಭಾಗವಾಗಿರುವ ಎನ್ಇಪಿಯನ್ನು ರಾಜ್ಯದಲ್ಲಿ ಕೈಬಿಡಬೇಕು” ಎಂದು ಆಗ್ರಹಿಸಿದರು.
ಇದಕ್ಕೆ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಈ ವರ್ಷ ತಡ ನೀಡಲಾಗಿದೆ. ಮುಂದಿನ ವರ್ಷದಿಂದ ಪೂರ್ಣವಾಗಿ ಎನ್ಇಪಿ ರದ್ದು ಮಾಡುತ್ತೇವೆ. ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದ.ಕನ್ನಡ ಜಿಲ್ಲೆಯ ಮೂರು ಕಡೆ NIA ದಾಳಿ, ಪಿಎಫ್ಐ ಫಂಡಿಂಗ್ ನೆಟ್ವರ್ಕ್ ಬಗ್ಗೆ ತನಿಖೆ
ಎನ್ಇಪಿಗೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಎಲ್ಲರ ವಿರೋಧವಿದೆ. ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕದಲ್ಲಿ ತರಾತುರಿಯಲ್ಲಿ ಅನುಷ್ಠಾನ ಆರಂಭಿಸಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
“ನಾಗಪುರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲೇ ಎನ್ಇಪಿ ಕರಡು ತಯಾರಾಗಿತ್ತು. ಬಹಳ ಹಿಂದೆಯೇ ಅದು ಸೋರಿಕೆಯಾಗಿತ್ತು. ರಾಜ್ಯಸಭೆಯಲ್ಲೇ ಈ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೆ. ಆರ್ಎಸ್ಎಸ್ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಎನ್ಇಪಿಯನ್ನು ಬಳಸಿಕೊಳ್ಳುತ್ತಿದೆ” ಎಂದು ರೆಹಮಾನ್ ಖಾನ್ ಆರೋಪಿಸಿದರು.