ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡೆ ‘ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ” ಎನ್ನುವಂತಿದೆ. ‘ಅಕ್ಕಿ ಖರ್ಚು ಮಾಡದೆ ನೆಂಟಸ್ತನ ಉಳಿಸಿಕೊಳ್ಳುವ’ ಪ್ರಯತ್ನ ಮಾಡಿದರು. ಸಫಲವಾಗಿಲ್ಲ. ಅಂದರೆ ಚುನಾವಣಾ ತಂತ್ರಗಾರನಾಗಿ ನೂರಾರು ಕೋಟಿ ರೂಪಾಯಿಗಳನ್ನು ದುಡಿಯುವ (ಬೇರೆ ಪಕ್ಷಗಳ ಮೂಲಕ) Option ಅನ್ನು ಮುಕ್ತವಾಗಿ ಇಟ್ಟುಕೊಂಡೇ ಕಾಂಗ್ರೆಸ್ ಪಕ್ಷ ಸೇರಿ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಪ್ರವರ್ಧಮಾನಕ್ಕೆ ಬರಲು ಬಯಸಿದ್ದರು. ಸಾಧ್ಯವಾಗಿಲ್ಲ.
‘ಪ್ರಶಾಂತ್ ಕಿಶೋರ್ ಅವರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದೆವು. ಅವರು ನಿರಾಕರಿಸಿದ್ದಾರೆ’ ಎಂದು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಪ್ರಶಾಂತ್ ಕಿಶೋರ್ ಯಾವುದೇ ಚಕಾರ ಎತ್ತಿಲ್ಲ. ಇದಾದ ಬಳಿಕ ಈ ಘಟನಾವಳಿಗಳಿಂದ ಕಾಂಗ್ರೆಸ್ ಮಾನ ಹರಜಾಯಿತು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು Expose ಮಾಡಿಬಿಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಕಿಮ್ಮತ್ತೇ ಇಲ್ಲ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಪೂರ್ವಾಗ್ರಹ ಪೀಡಿತ ಮಾಧ್ಯಮಗಳು ತುಸು ಹೆಚ್ಚಾಗಿಯೇ ಉಪ್ಪು-ಕಾರ ಹಾಕುತ್ತಿವೆ.
ಆದರೆ ಇನ್ನೂ ಹಲವು ವಿಷಯಗಳು ಚರ್ಚೆಯಾಗಬೇಕಿದೆ. ಮೊದಲನೆಯದು ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಗಳ ಬಗ್ಗೆ. ಇನ್ನೊಂದು ಕಾಂಗ್ರೆಸ್ ಸೇರಲು ಪ್ರಶಾಂತ್ ಕಿಶೋರ್ ಪಟ್ಟ ಪ್ರಯಾಸದ ಬಗ್ಗೆ. ಮೂರನೇಯದು ಪ್ರಶಾಂತ್ ಕಿಶೋರ್ ಅವರ ಅನೈತಿಕತೆ ಬಗ್ಗೆ. ಇದರ ಹೊರತಾಗಿ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅಥವಾ ಹೊರಗಡೆಯಿಂದ ಅವರ ಸಹಕಾರ ಪಡೆಯುವ ಬಗ್ಗೆ ಕಾಂಗ್ರೆಸ್ ಅನುಸರಿಸಿದ ಕ್ರಮಗಳ ಬಗ್ಗೆ…
ಮೊದಲನೆಯದಾಗಿ 2012ರಿಂದ ಚುನಾವಣಾ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ‘ಗೆಲ್ಲಬಹುದಾದ ವಾತಾವರಣದಲ್ಲಿ’ ಮಾತ್ರ ದಿಗ್ವಿಜಯ ಸಾಧಿಸಿದ್ದಾರೆ. ಅದು 2014ರ ಲೋಕಸಭಾ ಚುನಾವಣೆ, 2019ರ ಆಂಧ್ರಪ್ರದೇಶ, 2020ರ ಬಿಹಾರ ಮತ್ತು ದೆಹಲಿ ಹಾಗೂ 2021ರ ಪಶ್ಚಿಮಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಮಾಡಿದ ಪಕ್ಷಗಳು ಅವರ ಚಾಣಾಕ್ಷತನ ಇಲ್ಲದಿದ್ದರೂ ಗೆಲ್ಲುತ್ತಿದ್ದೆವು. ಇದರ ಹೊರತಾಗಿ ಅವರು 2017ರಲ್ಲಿ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಆದರೆ ಪಂಜಾಬಿನಲ್ಲಿ ಕಾಂಗ್ರೆಸ್ ಗೆದ್ದಿದ್ದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಕಾರಣಕ್ಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದಕ್ಕೂ ಮಿಗಿಲಾಗಿ ಇದೇ ಪ್ರಶಾಂತ್ ಕಿಶೋರ್ ಅಮೃತಸರಕ್ಕೆ ಕಾಲಿಡಲು ಬಿಟ್ಟಿರಲಿಲ್ಲ. ಕ್ಯಾಪ್ಟನ್. ಅದೇ ವರ್ಷ ಪ್ರಶಾಂತ್ ಕಿಶೋರ್ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರ ತಂತ್ರಗಾರಿಕೆ ಮಾಡಿದ್ದರು. 403 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶದಲ್ಲಿ ಆಗ ಕಾಂಗ್ರೆಸ್ ಗೆದ್ದದ್ದು ಕೇವಲ 7 ಸ್ಥಾನಗಳನ್ನು.
ಪ್ರಶಾಂತ್ ಕಿಶೋರ್ ತಮ್ಮ ತಂತ್ರಗಾರಿಕೆ ಮೂಲಕ ಇಡೀ ಚುನಾವಣಾ ಕಣವನ್ನೇ ಬುಡಮೇಲು ಮಾಡಿ ಗೆಲುವು ಸಾಧಿಸಿದ್ದು ಎಲ್ಲಿ? ಗೋವಾದಲ್ಲಿ ಇಂಥದೊಂದು ಪ್ರಯೋಗ ಮಾಡಿದರು. ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಡಲ ತಡಿಯ ಸಣ್ಣ ರಾಜ್ಯದಲ್ಲಿ ಕಣಕ್ಕಿಳಿಸಿ ಇನ್ನಿಲ್ಲದ ಪ್ರಚಾರ ಮಾಡಿ, ನೂರಾರು ಕೋಟಿ ರೂಪಾಯಿಯನ್ನು ನೀರಿನಂತೆ ಖರ್ಚು ಮಾಡಿದರೂ ಒಂದೇ ಒಂದು ಸೀಟನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇಂತಹ ಪ್ರಶಾಂತ್ ಕಿಶೋರ್ ಈಗ ಎಲ್ಲರಿಗೂ ಗೊತ್ತಿರುವ ‘2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ’ ಎಂಬ ಸತ್ಯವನ್ನು ಸುಳ್ಳು ಮಾಡುವುದಾಗಿ ಹೇಳುತ್ತಿದ್ದಾರೆ.
ಇನ್ನು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ವಿಷಯವನ್ನು (ಈಗ ಇಲ್ಲ) ಅವಲೋಕಿಸಲು ಅವರ ಹಿಂದಿನ ನಡೆಗಳನ್ನು ಗಮನಿಸಬೇಕು. ಹಿಂದೆ ಪ್ರಶಾಂತ್ ಕಿಶೋರ್ ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ನಿತೀಶ್ ಕುಮಾರ್ ನಂತರ ತಮ್ಮದೇ ಆಟ ಎಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆಯಂತೆ ನಿತೀಶ್ ನಿವೃತ್ತಿ ಹೊಂದಲಿಲ್ಲ, ಬದಲಿಗೆ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿಕೊಂಡರು. ಇದಾದ ಬಳಿಕ ಆಮ್ ಆದ್ಮಿ ಪಕ್ಷವನ್ನು ಬಿಹಾರದಲ್ಲಿ ಬೇರೂರುವಂತೆ ಮಾಡಲು ಆಲೋಚನೆ ಮಾಡಿದರು. ಆದರೆ ಅಗತ್ಯಕ್ಕೆ ತಕ್ಕಷ್ಟು ಬೆವರು ಹರಿಸಲು ಸಿದ್ದರಿರಲಿಲ್ಲ. ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಕನಿಷ್ಠ ಮಟ್ಟದ ಸಾಧನೆಯನ್ನಾದರೂ ಮಾಡಿದ್ದರೆ ಆ ಪಕ್ಷದಲ್ಲಿ ಸ್ಥಾನಪಡೆದು ಸಾಮ್ರಾಜ್ಯ ವಿಸ್ತರಣೆ ಮಾಡಲು ಮುಂದಾಗುತ್ತಿದ್ದರು. ಅದೂ ಸಾಧ್ಯವಾಗಿಲ್ಲ.
ಬೇರೆ ಯಾವುದೇ ಪ್ರಾದೇಶಿಕ ಪಕ್ಷಗಳೂ ಬೇರೆ ರಾಜ್ಯಗಳಲ್ಲಿ ಬೆಳೆಯುವ ಉದ್ದೇಶವನ್ನೇ ಇಟ್ಟುಕೊಂಡಿಲ್ಲ. ಹಾಗಾಗಿ ಎಂ.ಕೆ. ಸ್ಟಾಲಿನ್, ಜಗನಮೋಹನ್ ರೆಡ್ಡಿ, ಕೆ. ಚಂದ್ರಶೇಖರ್ ರಾವ್ ಮತ್ತು ನವೀನ್ ಪಾಟ್ನಾಯಕ್ ಜೊತೆ ಪ್ರಶಾಂತ್ ಕಿಶೋರ್ ನಡೆಸಿರುವ ಮಾತುಕತೆಗಳು ಪ್ರಯೋಜನ ತಂದುಕೊಟ್ಟಿಲ್ಲ. ಹಾಗಾಗಿ ಅಂತಿಮವಾಗಿ ಪ್ರಶಾಂತ್ ಕಿಶೋರ್ ಕನಸು ಕಂಡಿದ್ದು ಕಾಂಗ್ರೆಸ್ ಸೇರುವ ಬಗ್ಗೆ. ಕಾಂಗ್ರೆಸ್ ಸೇರುವ ಮೊದಲೇ ‘ಪಕ್ಷ ಬಹಳ ಕಷ್ಟದಲ್ಲಿದೆ’ ಎಂದು ವೇದಿಕೆ ಸಿದ್ಧಪಡಿಸಲು ಮುಂದಾದರು. ಕಷ್ಟದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ತನ್ನ ತಂತ್ರಗಾರಿಕೆ ಅಗತ್ಯವಿದೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೆ ಪೂರಕವಾಗಿ ವೀರಪ್ಪ ಮೊಯ್ಲಿ ಅವರಂತಹ ನಾಯಕರು ಬಹಿರಂಗವಾಗಿಯೇ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಡ ಹೇರಿದರು. ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆಗೆ ಅಡ್ಡಗಾಲು ಹಾಕುತ್ತಿರುವವರು ‘ಸುಧಾರಣಾ ವಿರೋಧಿಗಳು’ ಎಂದು ಜರಿದರು.
ಇಂದಿರಾ ಗಾಂಧಿ ಅವರಂತಹ ಧೀಮಂತ, ಗಟ್ಟಿಗಿತ್ತಿ ನಾಯಕಿ ವಿರುದ್ಧವೇ ಬಂಡೆದ್ದಿದ್ದವರು, ರಾಜೀವ್ ಗಾಂಧಿ ಅವರನ್ನು ಆತ್ಮೀಯ ಬಳಗದಲ್ಲಿದ್ದುಕೊಂಡೇ ಹಳ್ಳಕ್ಕೆ ತಳ್ಳಿದವರು, ಸೋನಿಯಾ ಗಾಂಧಿ ಅವರಂತಹ ಮಾತೃಹೃದಯಿ ನಾಯಕಿ ಮೇಲೆ ವಿದೇಶಿ ಮಹಿಳೆ ಎಂಬ ಕೂಗೆಬ್ಬಿಸಿದವರು, ರಾಹುಲ್ ಗಾಂಧಿ ಅಧ್ಯಕ್ಷರಾಗಲು ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ತಂದೊಡ್ಡಿದ್ದವರು ಕಾಂಗ್ರೆಸಿಗರು. ಇಂಥ ಕಾಂಗ್ರೆಸಿಗರು ಪ್ರಶಾಂತ್ ಕಿಶೋರ್ ಸೇರ್ಪಡೆಯನ್ನು ಸುಲಭದಲ್ಲಿ ಅರಗಿಸಿಕೊಳ್ಳುವರೇ? ಅದೂ ಅಲ್ಲದೇ ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು, ತಾವು ಕಾರ್ಯಾಧ್ಯಕ್ಷರಾಗಬೇಕು ಎಂದು ಎಣಿಸಿದ್ದರು ಪ್ರಶಾಂತ್ ಕಿಶೋರ್. ಇಲ್ಲವಾದರೆ ಉಪಾಧ್ಯಕ ಆಗಬೇಕು ಎಂದುಕೊಂಡಿದ್ದರು. ಸಹಿಸುವರಾ ಕಾಂಗ್ರೆಸಿಗರು?
ಇಂದಿರಾ ಗಾಂಧಿ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ನಾಯಕರದ್ದು ಕುತಂತ್ರವೇ. ಆದರೆ ಪ್ರಶಾಂತ್ ಕಿಶೋರ್ ವಿಷಯದಲ್ಲಿ ತರ್ಕವಿದೆ. ನಿನ್ನೆ-ಮೊನ್ನೆವರೆಗೂ ಕಾಂಗ್ರೆಸ್ ಅನ್ನು ನಿಂದಿಸಿ-ಮೂದಲಿಸಿದವರು ಪ್ರಶಾಂತ್ ಕಿಶೋರ್. ಕಾಂಗ್ರೆಸ್ ಪಕ್ಷವನ್ನು ಅಣಿಯುವ ವಿರೋಧಿಗಳ ಜೊತೆಗಿದ್ದವರು. ಇಂದು ಅವರು ದಿಢೀರನೆ ತೋರುವ ಪ್ರೀತಿಯನ್ನು ಒಪ್ಪಿಕೊಳ್ಳಬೇಕೆಂಬ ವಾದದಲ್ಲಿ ಹುರುಳಿದೆ. ಪಕ್ಷ ಸೇರುವ ಮುನ್ನವೇ ಕಾರ್ಯಾಧ್ಯಕ್ಷ ಸ್ಥಾನಬೇಕು, ಉಪಾಧ್ಯಕ್ಷ ಸ್ಥಾನ ಕೊಡಿ, ಕಡೆಪಕ್ಷ ಪ್ರಧಾನ ಕಾರ್ಯಾಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು, ಅದೂ ಮಾಧ್ಯಮ ನಿರ್ವಹಣೆಯ ಹೊಣೆಗಾರಿಕೆಯೇ ಬೇಕು ಎಂಬ ಬೇಡಿಕೆಗಳಲ್ಲಿ ದುರುದ್ದೇಶ ಹುಡುಕುವುದರಲ್ಲಿ ಅರ್ಥವಿದೆ.
ಎಲ್ಲಕ್ಕಿಂತ ಮಿಗಿಲಾಗಿ ನಿಜಕ್ಕೂ ಅವರು ಕಾಂಗ್ರೆಸ್ ಸೇರಲೇಬೇಕು ಎಂದಿದ್ದರೆ, ಪರಿವರ್ತನೆ ಬಯಸಿದ್ದರೆ ಅವರ ಸಂಸ್ಥೆ I-PAC ಅನ್ನು ಬರ್ಖಾಸ್ತು ಮಾಡಿ. ಮುಂದೆ ಯಾವುದೇ ಪಕ್ಷದ ಪರ ತಾನು ಮತ್ತು ತನ್ನ ಸಂಸ್ಥೆ I-PAC ತಂತ್ರಗಾರಿಕೆ ಮಾಡುವುದಿಲ್ಲ ಎನ್ನುವುದನ್ನು ಬಹಿರಂಗವಾಗಿ ಘೋಷಿಸಬೇಕಿತ್ತು. ಅದು ಬಿಟ್ಟು ‘ನಾನು I-PACನಿಂದ ದೂರ ಆಗಿದ್ದೇನೆ. ಕಾಂಗ್ರೆಸ್ ಸೇರುತ್ತೇನೆ. ತನ್ನದೇ I-PAC ಬೇರೆ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ಮಾಡುತ್ತದೆ’ ಎಂದರೆ ಏನರ್ಥ? ‘ಗಂಟೂ ಬೇಕು, ನಂಟೂ ಬೇಕು’ ಎಂಬ ದ್ವಿಮುಖ ನೀತಿಯನ್ನು ‘ನೈತಿಕತೆ’ ಎಂದು ಹೇಳಲು ಸಾಧ್ಯವೇ? ನೈತಿಕತೆ ಇಲ್ಲದ ನಡೆ Convincing ಆಗಿರಲು ಸಾಧ್ಯವೇ?
ಕಡೆಯದಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ಮಹತ್ವದ ಸಂಗತಿಗಳೇನೂ ಇಲ್ಲ. ಗೆಲ್ಲಲು ಬೇಕಾದ ಗುಟ್ಟುಗಳಿಲ್ಲ. ಇದನ್ನು ಕೇಳಲು ಕಾಂಗ್ರೆಸ್ ನಾಯಕರು ಪ್ರಶಾಂತ್ ಕಿಶೋರ್ ಅವರಿಗೆ ಅವಕಾಶ ಕೊಡುವ ಅಗತ್ಯವೂ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಶಾಂತ್ ಕಿಶೋರ್ ಮನಸ್ಥಿತಿ, ವ್ಯಾಪಾರಿ ಮನೋಭಾವ, ಉದ್ದೇಶಗಳನ್ನು ಅರಿತು ದೂರ ಇಡಬೇಕಿತ್ತು. ಒಬ್ಬ ಚುನಾವಣಾ ತಂತ್ರಜ್ಞನಾಗಿ ಅವರು ಏನು ಮಾಡುತ್ತಾರೆ ಎಂಬುದನ್ನು ಗಮನಿಸಲು ಅದಕ್ಕೆ ತಕ್ಕಹಾಗೆ ತಾವೂ ಪ್ರತಿತಂತ್ರ ಹೂಡಲು ಏನು ಮಾಡಬೇಕೆಂದು ಯೋಚನೆ ಮಾಡಬೇಕಿತ್ತು. ಸಣ್ಣ ಸಣ್ಣ ತಪ್ಪುಗಳಿಂದ ಮತ್ತು ಸಣ್ಣ ವ್ಯಕ್ತಿಗಳಿಗೆ ತೋರುವ ದೊಡ್ಡತನದಿಂದ ಕಾಂಗ್ರೆಸ್ ಭಾರೀ ನಷ್ಟ ಮಾಡಿಕೊಳ್ಳುತ್ತದೆ. ಪ್ರಶಾಂತ್ ಕಿಶೋರ್ ಅಂವರಂತಹವರು ಮಾರ್ಕೆಟಿಂಗ್ ಹೆಚ್ಚಿಸಿಕೊಳ್ಳುತ್ತಾರೆ.