ಮಲೆನಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಹೋಗುವುದೇ ಒಂದು ಅಪೂರ್ವ ಅನುಭವ. ಜೊತೆಗೆ ಅಲ್ಲಿನ ಕಡಿದಾದ, ದುರ್ಗಮ ಮಣ್ಣಿನ ಹಾದಿಯಲ್ಲಿ ನಿಪುಣ ಚಾಲಕರ ಜೀಪುಗಳಲ್ಲಿ ಪ್ರಯಾಣಿಸಿ ಬೆಟ್ಟ ಹತ್ತುವುದು ಒಂದು ರೋಚಕ ಸಂಗತಿ. ಮಲೆಘಟ್ಟದ ನಡುವಿನ ಅಪೂರ್ವ ಚಾರಣ ಮತ್ತು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ರೋಚಕ ಜೀಪ್ ಪ್ರಯಾಣದ ಕಾರಣಕ್ಕೇ ಕೊಡಚಾದ್ರಿಯ ಪ್ರವಾಸ ಎಂಬುದು ಒಂದಿಡೀ ಜೀವಮಾನ ಪೂರಾ ಮೆಲುಕುಹಾಕುವ ನೆನಪಾಗಿ ಉಳಿಯುತ್ತದೆ.
ಆದರೆ, ಇದೀಗ ಸರ್ಕಾರ ಈ ಕೊಡಚಾದ್ರಿಗೆ ಉಡುಪಿ ಜಿಲ್ಲೆಯ ಕೊಲ್ಲೂರಿನಿಂದ ರೋಪ್ ವೇ ನಿರ್ಮಾಣ ಮಾಡಲು ಮುಂದಾಗಿದೆ. ಹಾಗೇ ಜೀಪ್ ಸಂಚಾರದ ಮಣ್ಣಿನ ರಸ್ತೆಯ ಬದಲಿಗೆ ಸಿಮೆಂಟ್ ಕಟ್ಟಿನಹೊಳೆಯಿಂದ ಕೊಡಚಾದ್ರಿ ನೆತ್ತಿಯ ವರೆಗೆ ಸಿಮೆಂಟ್ ರಸ್ತೆ ಮಾಡುವ ಪ್ರಸ್ತಾವನೆಗೂ ಸರ್ಕಾರ ಅನುಮೋದನೆ ನೀಡಿದೆ.
ಈ ಎರಡೂ ಯೋಜನೆಗಳು ಅತಿ ಸೂಕ್ಷ್ಮ ಪರಿಸರ ಪ್ರದೇಶವಾದ ಮೂಕಾಂಬಿಕಾ ಅಭಯಾರಣ್ಯದ ನಟ್ಟನಡುವೆಯೇ ಹಾದುಹೋಗಲಿವೆ ಮತ್ತು ಆ ಕುರಿತು ಕೇಂದ್ರ ಪರಿಸರ ಇಲಾಖೆ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳ ಅನುಮತಿ ಪಡೆಯುವ ಪ್ರಕ್ರಿಯೆಗೆ ಮುನ್ನವೇ ಸರ್ಕಾರ ತರಾತುರಿಯಲ್ಲಿ ಡಿಪಿಆರ್ ತಯಾರಿಸಿ, ಕಾಮಗಾರಿಯ ಗುತ್ತಿಗೆಯನ್ನೂ ನೀಡಿಯಾಗಿದೆ! ಕಳೆದ ವರ್ಷದ ಸೆಪ್ಟೆಂಬರಿನಲ್ಲಿಯೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಡಿಪಿಆರ್ ತಯಾರಿಗೆ ಕೊಲ್ಲೂರಿನಲ್ಲಿ ಚಾಲನೆ ನೀಡುತ್ತಾ, ಯುಪಿಐಎಲ್ ಸಂಸ್ಥೆಯೊಂದಿಗೆ ಖಾಸಗೀ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಸುಮಾರು 1200 ಕೋಟಿ ವೆಚ್ಚದ ರೋಪ್ ವೇ ಯೋಜನೆ ಅನುಷ್ಠಾನವಾಗಲಿದ್ದು, ಅತಿ ಶೀಘ್ರವೇ ಪ್ರವಾಸಿಗರು ಕೊಲ್ಲೂರಿನಿಂದ 6.8 ಕಿ.ಮೀ ದೂರದ ರೋಪ್ ವೇನಲ್ಲಿ ಕೊಡಚಾದ್ರಿಯ ನೆತ್ತಿಗೆ ತಲುಪಬಹುದು ಎಂದಿದ್ದರು.
ಮತ್ತೊಂದು ಕಡೆ ಹೊಸನಗರ ತಾಲೂಕಿನ ಕಟ್ಟಿನಹೊಳೆಯಿಂದ ಕೊಡಚಾದ್ರಿಯ ತುದಿಗೆ ಹಾಲಿ ಇರುವ ಜೀಪ್ ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಯೋಜನೆಯ ಡಿಪಿಆರ್ ಕೂಡ ಆಗಿದೆ. ರಾಜ್ಯ ರಸ್ತೆ ಅಭಿವೃದ್ದಿ ನಿಗಮದಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಮೂಕಾಂಬಿಕಾ ಅಭಯಾರಣ್ಯದ ಒಟ್ಟು 12 ಎಕರೆಗೂ ಅಧಿಕ ಅರಣ್ಯ ಪ್ರದೇಶವನ್ನು ಪರಿವರ್ತನೆ ಮಾಡಿಕೊಡುವಂತೆ ಕೋರಲಾಗಿದೆ.
ಈ ಎರಡೂ ಯೋಜನೆಗಳು ಮೂಕಾಂಬಿಕಾ ಅಭಯಾರಣ್ಯದ ನಟ್ಟನಡುವೆಯೂ ಹಾದುಹೋಗುತ್ತಿದ್ದರೂ, ಯೋಜನೆ ಕಾಮಗಾರಿಗೆ ಮತ್ತು ಕಾಮಗಾರಿಯ ಸರಕು ಸರಂಜಾಮು ರಸ್ತೆ ನಿರ್ಮಾಣಕ್ಕಾಗಿ ಸಾವಿರಾರು ಮರಗಳ ಮಾರಣಹೋಮ ಮತ್ತು ಪರಿಸರ ನಾಶ ಶತಸಿದ್ಧವಾಗಿದ್ದರೂ ಶಿವಮೊಗ್ಗ ಸಂಸದರು, ಬೈಂದೂರು, ತೀರ್ಥಹಳ್ಳಿ ಮತ್ತು ಸಾಗರ ಶಾಸಕರು ಸೇರಿದಂತೆ ಪ್ರತಿಯೊಬ್ಬ ಜನಪ್ರತಿನಿಧಿಯೂ ಯೋಜನೆಯಿಂದ ಯಾವುದೇ ಅರಣ್ಯನಾಶವಾಗುವುದಿಲ್ಲ, ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದೇ ಸಮಜಾಯಿಷಿ ನೀಡುತ್ತಿದ್ದಾರೆ.
ಆದರೆ, ಸ್ಥಳೀಯವಾಗಿ ಆ ಎರಡೂ ಯೋಜನೆಯ ಬಗ್ಗೆ ಮಿಶ್ರಪ್ರತಿಕ್ರಿಯೆಗಳಿವೆ. ಸಿಮೆಂಟ್ ರಸ್ತೆ ನಿರ್ಮಾಣದಿಂದಾಗಿ ಕೊಡಚಾದ್ರಿಗೆ ಪ್ರವಾಸಿಗರು ಹೋಗಿಬರುವುದು ಸುಲಭವಾಗಲಿದೆ ಎಂಬುದನ್ನು ಹೊರತುಪಡಿಸಿದರೆ, ಹಾಲಿ ಆ ಕಡಿದಾದ ರಸ್ತೆಯಲ್ಲಿ ಜೀವ ಪಣಕ್ಕಿಟ್ಟು ಜೀಪ್ ಚಲಾಯಿಸಿಕೊಂಡು ಪ್ರವಾಸಿಗರು ನೀಡುವ ಬಾಡಿಗೆಯಲ್ಲೇ ಜೀವನ ಸಾಗಿಸುತ್ತಿರುವ ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗುತ್ತವೆ. ಜೊತೆಗೆ, ಅಭಯಾರಣ್ಯದ ಒಳಗೆ, ಕೊಡಚಾದ್ರಿಯಂತಹ ದಟ್ಟ ಅರಣ್ಯದ ನಡುವೆ ಸಿಮೆಂಟ್ ರಸ್ತೆ ಮಾಡಿ ಖಾಸಗಿ ವಾಹನಗಳಿಗೆ ಯಾವ ನಿರ್ಬಂಧವಿರದೆ ಸಂಚರಿಸಲು ಅನುವು ಮಾಡಿಕೊಟ್ಟರೆ ಕೊಡಚಾದ್ರಿ ಮಾತ್ರವಲ್ಲದೆ ಇಡೀ ಆ ಪರಿಸರದಲ್ಲಿ ಆಗಬಹುದಾದ ಸದ್ದುಗದ್ದಲ, ಕಸ, ಅಂಗಡಿಮುಂಗಟ್ಟುಗಳು ತಲೆ ಎತ್ತುವುದರಿಂದ ಆಗುವ ಪರಿಸರ ಹಾನಿಯ ಪ್ರಮಾಣದ ಅರಿವು ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಇಲ್ಲವೆ? ಎಂಬ ಪ್ರಶ್ನೆ ಕೂಡ ಎದ್ದಿದೆ.
“ಕೊಡಚಾದ್ರಿ ಗಿರಿ ಶಂಕರಾಚಾರ್ಯರ ಪವಿತ್ರ ತಪೋಭೂಮಿ. ಹಾಗಾಗಿ ಆ ಸ್ಥಳಕ್ಕೆ ಒಂದು ಪಾವಿತ್ರ್ಯತೆ ಇದೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆ ಸ್ಥಳದ ಘನತೆ ಮತ್ತು ಪರಿಸರದ ಪ್ರಶಾಂತತೆಗೆ, ವನ್ಯಜೀವಿಗಳ ನೆಮ್ಮದಿಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಅಲ್ಲಿ ಸಂಪೂರ್ಣ ಪ್ರವಾಸಿ ಚಟುವಟಿಕೆಯನ್ನು ನಿಷೇಧಿಸಿ, ಆ ಪರಿಸರದ ಧಾರ್ಮಿಕ ಪಾವಿತ್ರ್ಯ ಮತ್ತು ಪರಿಸರ ನೈರ್ಮಲ್ಯವನ್ನು ಕಾಯಬೇಕಿದ್ದ ಸರ್ಕಾರಗಳೇ ಹೀಗೆ ಸ್ಥಳ ಮತ್ತು ಪರಿಸ್ಥಿತಿಯ ಸೂಕ್ಷ್ಮತೆಯನ್ನೇ ಮರೆತು ದಂಧೆ ಮಾಡಲು ನಿಂತರೆ, ಬೇಲಿಯೇ ಎದ್ದು ಹೊಲಮೇಯ್ದಂತೆ ಆಗಿದೆ. ಇದು ತೀರಾ ಆಘಾತಕಾರಿ ನಡೆ. ಅಷ್ಟಕ್ಕೂ ಈ ಎರಡೂ ಯೋಜನೆಗಳ ಬಗ್ಗೆ ಯಾವ ಸ್ಥಳೀಯರು ಯಾರ ಮುಂದೆಯೂ ಬೇಡಿಕೆ ಇಟ್ಟಿರಲಿಲ್ಲ. ಇದು ಸಂಪೂರ್ಣವಾಗಿ ಗುತ್ತಿಗೆ ಲಾಭಿ ಮತ್ತು ಕಿಕ್ ಬ್ಯಾಕ್ ಲಾಬಿಯ ಯೋಜನೆ” ಎಂಬುದು ಪರಿಸರ ಕಾರ್ಯಕರ್ತ ಸಹದೇವ್ ಅವರ ಆಕ್ರೋಶದ ಮಾತು.
ಹಾಗೇ ಕೊಡಚಾದ್ರಿ ಗಿರಿಗೆ ಕೊಲ್ಲೂರಿನಿಂದ ಕೇಬಲ್ ಕಾರ್ ಆರಂಭಿಸುವುದು ಸೂಕ್ತ ನಿರ್ಧಾರವಲ್ಲ. ಇದರಿಂದ ಪ್ರವಾಸಿಗರನ್ನೇ ನಂಬಿಕೊಂಡಿರುವ ಕೊಡಚಾದ್ರಿ ತಪ್ಪಲಿನ ನಿಟ್ಟೂರು, ಸಂಪೇಕಟ್ಟೆ, ಕಟ್ಟಿನಹೊಳೆಯ 30ಕ್ಕೂ ಅಧಿಕ ಹೋಮ್ ಸ್ಟೆ, ರೆಸಾರ್ಟ್‌ಗಳು ಹಾಗೂ 250ಕ್ಕೂ ಹೆಚ್ಚು ಬಾಡಿಗೆ ಜೀಪ್ ಮಾಲೀಕರು, ಚಾಲಕರು ಮತ್ತು ಹೋಟಲುಗಳ ವ್ಯಾಪಾರ, ದುಡಿಮೆಗೆ ಸಂಚಕಾರ ಬರುತ್ತದೆ. ಅಲ್ಲದೆ, ರೋಪ್‌ವೆ ನಿರ್ಮಾಣದ ವೇಳೆ ದೊಡ್ಡ ದೊಡ್ಡ ಟವರ್ ಫಿಲ್ಲರ್‌ಗಳನ್ನು ನಿರ್ಮಿಸಲು ಬೃಹತ್ ಯಂತ್ರಗಳನ್ನು ಸಾಗಿಸುವಾಗ ಅರಣ್ಯ ನಾಶವಾಗುತ್ತದೆ. ಹಾಗಾಗಿ ಗುತ್ತಿಗೆದಾರರು ಮತ್ತು ರಾಜಕಾರಣಿಗಳ ಲಾಭಕ್ಕಾಗಿ ಕೊಡಚಾದ್ರಿಯಂತಹ ಸೂಕ್ಷ್ಮ ಪರಿಸರ ಪ್ರದೇಶವನ್ನು ಬಲಿಕೊಡುವುದು ಸರಿಯಲ್ಲ ಎಂಬ ಮಾತೂ ಕೇಳಿಬಂದಿದೆ.
“ಈ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಿ ಪರಿಸರ ನಾಶವನ್ನೂ ಮಾಡಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ, ಇದೇ ಭಾಗದಲ್ಲಿ ಶರಾವತಿ, ವಾರಾಹಿ ಮುಂತಾದ ಜಲವಿದ್ಯುತ್ ಯೋಜನೆಗಳ ಜಲಾಶಯಗಳಲ್ಲಿ ಆಸ್ತಿ-ಮನೆ ಮುಳುಗಡೆಯಾಗಿ ಒಕ್ಕಲೆದ್ದುಬಂದು, ನಿರ್ವಸತಿಗರಾಗಿ ಅಷ್ಟಿಷ್ಟು ಜಮೀನು ಮಾಡಿಕೊಂಡವರಿಗೆ ಭೂಮಿಯ ಹಕ್ಕು ನೀಡಲು ಅರಣ್ಯ ಕಾಯ್ದೆಗಳು ಅಡ್ಡಬರುತ್ತಿವೆ. ಇದು ಯಾವ ನ್ಯಾಯ? ಪ್ರವಾಸಿಗರ ಮೋಜು ಮಸ್ತಿಗಾಗಿ ಕೇಬಲ್ ಕಾರು, ಸಿಮೆಂಟ್ ರಸ್ತೆ ಮಾಡಲು ಅಡ್ಡಬರದ ಅರಣ್ಯ ಕಾನೂನುಗಳು ಬಡವರ ಜೀವನಾಧಾರವಾದ ಮೆಟ್ಟು ಜಾಗ ಮಂಜೂರು ಮಾಡಲು ಅಡ್ಡಬರುತ್ತವೆ ಎಂದರೆ ಏನರ್ಥ? ಯಾವುದೇ ಯೋಜನೆಗೆ ಮೊದಲು ಇಲ್ಲಿನ ಬಡವರ ಮನೆ, ಕೊಟ್ಟಿಗೆ, ಗದ್ದೆ, ತೋಟದ ಮಾಲೀಕತ್ವವನ್ನು ಅವರಿಗೆ ಕೊಡುವ ಕಾರ್ಯ ಜರೂರು ಆಗಬೇಕು. ಆ ಬಳಿಕ ಉಳಿದೆಲ್ಲಾ.. “ ಎನ್ನುತ್ತಾರೆ ಕೊಡಚಾದ್ರಿಯ ಅರ್ಚಕರಾದ ನಾಗೇಂದ್ರ ಜೋಗಿ.
ಮಲೆನಾಡಿನ ಸಾಲು ಸಾಲು ಜಲಾಶಯಗಳಲ್ಲಿ ಬದುಕು ಮುಳುಗಡೆಯಾಗಿ ಎತ್ತಂಗಡಿಯಾಗಿ ಕಾಡಂಚಿನಲ್ಲಿ ಹೊಸ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿಗೆ ಏಳೆಂಟು ದಶಕಗಳ ಬಳಿಕವೂ ಇಂದಿಗೂ ಅವರ ಮನೆ, ಗದ್ದೆ- ಜಮೀನುಗಳ ಹಕ್ಕು ಸಿಕ್ಕಿಲ್ಲ. ಆ ಎಲ್ಲಕ್ಕೂ ಅರಣ್ಯ ಕಾಯ್ದೆಗಳು ಅಡ್ಡಿಬಂದಿವೆ. ನಾಡಿಗೇ ಬೆಳಕು ಕೊಡಲು ಬದುಕು ತ್ಯಾಗ ಮಾಡಿದ ಜನರು ಸರಿಸುಮಾರು ಮುಕ್ಕಾಲು ಶತಮಾನದಿಂದ ದಿಕ್ಕೆಟ್ಟ ಸ್ಥಿತಿಯಲ್ಲಿದ್ದಾರೆ. ಅವರ ಅಂತಹ ಬದುಕಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತೋರದ ಆಸಕ್ತಿಯನ್ನು ಜನಪ್ರತಿನಿಧಿಗಳು, ಸ್ಥಳೀಯರಿಗೆ ಪ್ರಯೋಜನದ ಬದಲು ಉಪದ್ರವಕಾರಿಯಾಗಿರುವ ಸಾವಿರಾರು ಕೋಟಿ ಯೋಜನೆಗಳ ಬಗ್ಗೆ ತೋರುತ್ತಿರುವುದರ ಹಿಂದೆ ಏನು ಲಾಭವಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಇನ್ನು ಕೊಡಚಾದ್ರಿಗೆ ಈಗಿರುವ ರಸ್ತೆಯನ್ನೇ ಸಮತಟ್ಟು ಮಾಡಿ, ಉಂಡೆಗಲ್ಲು(ಬೋಡ್ರಸ್) ಹಾಕಿ ಬದಿ ಕಟ್ಟಿ ದುರಸ್ತಿ ಮಾಡಿ ಜೀಪ್ ಚಾಲನೆಗೆ ಅನುಕೂಲ ಮಾಡಿಕೊಟ್ಟರೆ ಸಾಕು ಎಂಬ ಮಾತೂ ಕೇಳಿಬರುತ್ತಿದೆ.
“ಕೊಡಚಾದ್ರಿಯಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನೀವು ಇರುವ ರಸ್ತೆಯನ್ನು ಇನ್ನಷ್ಟು ವಿಸ್ತರಿಸಿ ಕಾಂಕೀಟ್ ರಸ್ತೆ ಮಾಡಿದರೆ, ಇಲ್ಲಿ ಭಾರೀ ಮಳೆ ಮತ್ತು ಬೆಟ್ಟದ ಇಳಿಜಾರಿಗೆ ತಕ್ಕಂತೆ ಎರಡೂ ಬದಿ ಭಾರೀ ಗಾತ್ರದ ಚರಂಡಿಗಳನ್ನೂ ನಿರ್ಮಾಣ ಮಾಡಬೇಕಾಗುತ್ತದೆ. ಅದಕ್ಕಾಗಿ ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ಮರಗಳನ್ನು ಹನನ ಮಾಡಬೇಕಾಗುತ್ತದೆ. ಆದಾಗ್ಯೂ ಭಾರೀ ಚರಂಡಿಯಲ್ಲಿ ಹರಿಯುವ ನೀರೇ ಗುಡ್ಡ ಕುಸಿತಕ್ಕೂ ಕಾರಣವಾಗಬಹುದು. ಹಾಗಾಗಿ ಜನರ ತೆರಿಗೆ ಹಣ ಸುರಿದು ಪರಿಸರ ನಾಶವನ್ನೂ, ಇತ್ತ ಹಣವನ್ನೂ ವ್ಯರ್ಥ ಮಾಡುವ ಕಿಕ್ ಬ್ಯಾಕ್ ಯೋಜನೆಯ ಬದಲಿಗೆ ಇರುವ ರಸ್ತೆಯನ್ನೇ ಕಲ್ಲು ಹಾಕಿ ದುರಸ್ತಿ ಮಾಡುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು” ಎನ್ನುವುದು ಸ್ವತಃ ಜೀಪ್ ಮಾಲೀಕರಾಗಿರುವ ನಿಟ್ಟೂರಿನ ಮಂಜಪ್ಪ ಅವರ ಅಭಿಪ್ರಾಯ.
ಒಟ್ಟಾರೆ, ಕೊಡಚಾದ್ರಿಯಂತಹ ಸಹ್ಯಾದ್ರಿ ಶ್ರೇಣಿಯ ಅತಿ ಎತ್ತರದ ಗಿರಿಧಾಮದಲ್ಲಿ ಇರುವ ನೆಮ್ಮದಿ ಕೆಡಿಸುವ ಜೊತೆಗೆ ಗುತ್ತಿಗೆದಾರರ ಲಾಭಿ ಮತ್ತು ರಾಜಕಾರಣಿಗಳು ಕಿಕ್ ಬ್ಯಾಕ್ ಆಮಿಷದ ರೋಪ್ ವೇ ಮತ್ತು ಸಿಮೆಂಟ್ ರಸ್ತೆ ಯೋಜನೆಗಳೆರಡೂ, ಬೆಟ್ಟದ ತಪ್ಪಲಿನ ಪರಿಸರದಲ್ಲೂ ಭಿನ್ನಮತದ, ಅಪಸ್ವರದ ಸದ್ದುಗದ್ದಲಕ್ಕೆ ಕಾರಣವಾಗಿವೆ.