ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಿಜೆಪಿಯು ತನ್ನ ಸಿಎಎ ಪರ ಅಭಿಯಾನದ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ. ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಈ ವಿಷಯವನ್ನೇ ಮತ್ತೆ ಮತ್ತೆ ಪುರುಚ್ಚರಿಸುತ್ತಿದ್ದಾರೆ.
ʼಪಾರ್ಲಿಮೆಂಟ್‌ನಲ್ಲಿ ಸಿಎಎಯನ್ನು ವಿರೋಧಿಸುವವರು ಕಳೇದ 70 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಬೇಕಿತ್ತು. ಅದರ ಹೊರತಾಗಿ ಸಿಎಎ ವಿರುದ್ದ ಅಭಿಯಾನವನ್ನು ಕಾಂಗ್ರೆಸ್ ನಡೆಸುತ್ತಿದೆ,ʼ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಗೃಹ ಮಂತ್ರಿ ಅಮಿತ್ ಶಾ ಕಾಂಗ್ರೆಸ್‌ನವರು ಎಷ್ಟೇ ಪ್ರತಿಭಟಿಸಲಿ ಆದರೆ, CAA ಅನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದಾರೆ.
ಈ ಎಲ್ಲಾ ಹೇಳಿಕೆಗಳ ಒಳಾರ್ಥ. CAA, NRC ಹಾಗೂ NPRಅನ್ನು ವಿರೋಧಿಸುವವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡುವುದನ್ನು ತಡೆಯುತ್ತಿದ್ದಾರೆ ಎಂಬಂತೆ ಬಿಂಬಿಸುತ್ತವೆ. ಆದರೆ ಸತ್ಯ ಏನೆಂದರೆ, ಕಳೆದ ಹಲವು ದಿನಗಳಿಂದ ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ದ ಬೀದಿಗಿಳಿದು ಪ್ರತಿಭಟಿಸುವವರಲ್ಲಿ ಯಾರೂ ಕೂಡ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಲಿಲ್ಲ. ಆದರೆ, ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮೋದಿ ಮತ್ತು ಶಾ ದೇಶದ ಜನರ ಹಾದಿಯನ್ನು ತಪ್ಪಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
CAA ವಿರೋಧೀಸುವ ಪ್ರತಿಯೊಬ್ಬರೂ ಭಾರತದ ಸಂವಿಧಾನಕ್ಕೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆಯೇ ಹೊರತು, ಪಾಕಿಸ್ತಾನದ ಕುರಿತು ಹೊಗಳಿಕೆಯ ಮಾತುಗಳನ್ನಾಡಲಿಲ್ಲ. ಇನ್ನು ಈ ಕುರಿತು ಭಾರತದಲ್ಲಿ ನಡೆದ ದೊಡ್ಡ ಮಟ್ಟದ ಪ್ರತಿಭಟನೆಗಳಲ್ಲಿ ಕೂಡ ಈ ವಿಷಯವನ್ನು ಸ್ಪಷ್ಟವಾಗಿ ಉಚ್ಚರಿಸಲಾಗಿದೆ. ಆದರೂ ಬಿಜೆಪಿಯವರು ಪ್ರತಿಭಟನೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪದೇ ಪದೇ ಪಾಕಿಸ್ತಾನದ ಜಪ ಮಾಡುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿ ಅಲ್ಲಿನ ಮೂಲ ಸಾಂಸ್ಕೃತಿಕ ನೆಲೆಗಟ್ಟಿಗೆ CAA ಹಾಗೂ NRCಯಿಂದ ದಕ್ಕೆ ಬರುವ ಕಾರಣಕ್ಕಾಗಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನುಳಿದಂತೆ ಭಾರತದ ಇತರೆಡೆಗಳಲ್ಲಿ CAA ಹಾಗೂ NRC ಎರಡನ್ನೂ ಬಳಸಿಕೊಂಡು ಬಿಜೆಪಿಯು ಇಲ್ಲಿನ ಮುಸ್ಲಿಂ ಸಮುದಾಯವನ್ನು ಶೋಷಣೆಗೆ ತಳ್ಳುತ್ತಿದೆ ಎಂಬ ಕಾರಣಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಈ ಎರಡೂ ವರ್ಗಗಳಲ್ಲಿ ಯಾರೂ ಕೂಡ ಪಾಕಿಸ್ತಾನದ ಪ್ರಸ್ತಾಪವನ್ನು ಮಾಡಲಿಲ್ಲ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲಿಲ್ಲ. ಎಲ್ಲಾ ಪ್ರತಿಭಟನೆಗಳ ಮೂಲ ಉದ್ದೇಶ, ಭಾರತೀಯ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಅಮಿತತೆಯನ್ನು ಉಳಿಸಿಕೊಳ್ಳುವುದಷ್ಟೇ ಆಗಿದೆ.
The India Forum ಇತ್ತೀಚಿಗೆ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಕುರಿತು ಪ್ರಸ್ತಾಪವಿರುವ ಹೇಳಿಕೆಗಳನ್ನು ಕಲೆ ಹಾಕಿ ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಪ್ರಮುಖವಾದವು ಹೀಗಿವೆ:
· “ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುತ್ತಿರುವುದು ಖುಶಿಯ ವಿಚಾರ. ನಾವೆಲ್ಲಾ ಸೇರಿ ಅದನ್ನು ಸ್ವಾಗತಿಸುತ್ತೇವೆ. ಆದರೆ, ಭಾರತದಲ್ಲಿ ಪೌರತ್ವ ನೀಡಲು ಧರ್ಮವು ಒಂದು ಕಾನೂನಾತ್ಮಕ ಮಾನದಂಡವಾಗಿರುವುದು ಆತಂಕ ತರುವಂತಹ ವಿಷಯ.”
· “ಈ ಕಾನೂನು ರಾಜಕೀಯ ಹಾಗೂ ಓಟ್‌ಬ್ಯಾಂಕ್‌ಅನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೆ ತಂದದ್ದು. ಹಿಂದು ರಾಷ್ಟ್ರದ ಕಲ್ಪನೆಯನ್ನು ಸಾಖಾರಗೊಳಿಸುವ ಸಲುವಾಗಿ ರೂಪಿಸಿದಂತಹ ಕಾನೂನು ಇದಾಗಿದೆ. ಇದಕ್ಕೆ, ಶ್ರಿಲಂಕಾದ ತಮಿಳು ಮುಸ್ಲಿಂ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಅಹ್ಮದೀಯ ಮತ್ತು ಹಜ್ಹಾರ ಮುಸ್ಲಿಂ ಮತ್ತು ಮಯನ್ಮಾರ್‌ನ ರೋಹಿಂಗ್ಯಾಗಳನ್ನು ಈ ಕಾಯಿದೆಯಿಂದ ಹೊರಗಿಟ್ಟಿರುವುದೇ ಸಾಕ್ಷಿ.”
ಈ ಹೇಳಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವಂತಹ ಯಾವುದೇ ಸುಳಿವುಗಳು ಕಾಣುವುದಿಲ್ಲ, ಬದಲಾಗಿ ಸಂವಿಧಾನದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಪೌರತ್ವವನ್ನು ನೀಡಬೇಕು ಎಂಬ ಧೋರಣೆ ಮಾತ್ರ ಗೋಚರಿಸುತ್ತದೆ.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಭಾರತವು ಇನ್ನೊಂದು ಪಾಕಿಸ್ತಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವ ಮೂಲಕ ಭಾರತವು ಪಾಕಿಸ್ತಾನವಾಗಿ ಮಾರ್ಪಾಡಾಗುವ ಹಾದಿಯನ್ನು ಹಿಡಿದಿದೆ. ಇದು ಭಾರತೀಯ ಸಂವಿಧಾನದ ʼಜಾತ್ಯಾತೀತತೆಗೆ ಮಾರಕವಾಗಿದೆ. ಕೆಲವೊಂದು ತಾಂತ್ರಿಕ ಅಂಶಗಳು ಈ ಕಾನೂನಿಗೆ ಪೂರಕವಾಗಿದ್ದರೂ, ಈ ಕಾನೂನು ದೇಶದಲ್ಲಿ ಕೆಲವೊಂದು ಧರ್ಮಗಳು ಭಾರತೀಯ ಹಾಗೂ ಹಲವು ಧರ್ಮಗಳು ಭಾರತೀಯವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಪಾಕಿಸ್ತಾನದ ಮೂಲ ಮಂತ್ರವೂ ಆಗಿರುವುದು ಕಾಕತಾಳೀಯವಂತೂ ಅಲ್ಲ.
CAA ಹಾಗೂ NRC ಜೊತೆಯಲ್ಲಿ ಜಾರಿಗೆ ಬಂದರೆ, ಇದು ಭಾರತದ ಮುಸ್ಲಿಂರನ್ನು ಗುರಿಯಾಗಿಸುವುದಂತು ಸ್ಪಷ್ಟ. ಅಸ್ಸಾಂನಲ್ಲಿ ಜಾರಿಯಾದ ಎನ್‌ಆರ್‌ಸಿ ಮಾದರಿಯನ್ನು ಗಮನಿಸಿದರೆ, ಅಲ್ಲಿ ಬಲಿಯಾಗಿರುವುದು ಬಡವರು ಹಾಗೂ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದವರು. ಮತ್ತೆ ಅಸ್ಸಾಂನ NRC ಮಾದರಿ ಅತ್ಯಂತ ಕ್ಲಷ್ಟಕರವಾದ ಮಾದರಿಯಾಗಿತ್ತು. ಬಡವರಲ್ಲಿ ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ಅವರನ್ನು NRCಯಿಂದ ಹೊರಗಿಡಲಾಗಿತ್ತು. ನ್ಯಾಯ ಮಂಡಳಿಗಳಲ್ಲಿ ವಾದ ಮಾಡುವಷ್ಟು ಆರ್ಥಿಕವಾಗಿ ಸಬಲರಲ್ಲದವರು ಬಹಳಷ್ಟು ಮಂದಿ ಇದರಲ್ಲಿ ಸೇರಿದ್ದರು. ಹೀಗಾಗಿ, ಅಸ್ಸಾಂನ NRC ಮಾದರಿ ಭಾರತದ ಅಲ್ಪ ಸಂಖ್ಯಾತ ಹಾಗೂ ಬಡವರ ವಿರೋಧಿ ಎಂದು ಈಗಾಗಲೇ ಬಹಿರಂಗವಾಗಿದೆ.
ಸದ್ಯಕ್ಕೆ, NRC ಹಾಗೂ CAAಯ ಸ್ವರೂಪ ಭಾರತದಲ್ಲಿ ಹೀಗೆ ಇರಬಹುದೆಂದು ಹೇಳಲಾಗುವುದಿಲ್ಲವಾದರೂ, ಈವರೆಗಿನ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಕೇಂದ್ರ ಸರ್ಕಾರವೂ ಯಾವುದೇ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲದೇ ಇರುವುದು ಜನರಲ್ಲಿ ಆತಂಕ ಮುಂದುವರೆಯಲು ಕಾರಣವಾಗಿದೆ.
ಕೃಪೆ: ಸ್ಕ್ರೋಲ್.ಇನ್