ಕೇಂದ್ರ ಸರ್ಕಾರ ವಿವಾದಿತ ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದು ದೇಶಾದ್ಯಂತ ಪ್ರತಿಭಟನೆಗಳು ಆಗುವುದಕ್ಕೆ ಕಾರಣವಾಯಿತು. ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಬಿಜೆಪಿ ಕಳೆದ ವಾರ ಸಿಎಎ ಪರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆಗೆ ತೆರಳಿ ಅಭಿಯಾನ ಆರಂಭಿಸಿದೆ. ಇದಕ್ಕೆ ʼಜನ ಜಾಗರಣ ಅಭಿಯಾನʼ ಎಂದು ಹೆಸರನ್ನು ಸಹ ನಾಮಕರಣ ಮಾಡಿದೆ. ಬಿಜೆಪಿ ತನ್ನ ಹಿಡನ್ ಅಜೆಂಡಾ ಇಟ್ಟುಕೊಂಡು ಹಿಂದುಗಳ ಮತವನ್ನು ಓಲೈಸಿಕೊಳ್ಳುವುದಕ್ಕಾಗಿ ಈ ಅಭಿಯಾನ ಆರಂಭಿಸಿದೆ.
ಕೇರಳದಲ್ಲಿ ಸಿಎಎ ಪರವಾಗಿರುವ ಕಿರುಪುಸ್ತಕವನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಮುಸ್ಲಿಮರಿಗೆ ತೋರಿಸುವ ಮೂಲಕ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ನಂತರ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯಕರ್ತರು ಪ್ರಸಾರ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಮತ್ತೊಂದೆಡೆ, ಕೇರಳದ ಸಾಕಷ್ಟು ಮನೆಗಳಲ್ಲಿ ನಾವು ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುತ್ತಿದ್ದೇವೆ, ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ನಮ್ಮಿಂದ ದೂರವಿರಿ ಎಂದು ಪೋಸ್ಟರ್‌ಗಳನ್ನು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿವಾದಾತ್ಮಕ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಜೋರಾಗುತ್ತಿದ್ದಂತೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಜನರು ಸಿಎಎ ಪರವಾಗಿ ಬೆಂಬಲವನ್ನು ಸೆಳೆದುಕೊಳ್ಳಲು ನಾನಾ ತಂತ್ರಗಳನ್ನು ಪ್ರಾರಂಭಿಸಿವೆ. ಕೇರಳದಲ್ಲಿ ಜನರು ಸಾಮೂಹಿಕವಾಗಿ ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಅದರಲ್ಲೂ ಕೇರಳದ ಕೋಳಿಕೊಡ್ ಜಿಲ್ಲೆಯ ಕರಡಿ ಗ್ರಾಮದ ಸುಮಾರು 350 ಕುಟುಂಬಗಳು, ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯ ಕಡೆ ಬರಬಾರದು ಎಂದು ಪೋಸ್ಟರ್‌ಗಳನ್ನು ಹಾಕಿವೆ.
ಕೇರಳದ ಸಾಕಷ್ಟು ಮನೆಗಳಲ್ಲಿ ಜಾರಿಗೆ ತಂದಿರುವ ಸಿಎಎ ಅನ್ನು ವಾಪಸ್ ಪಡೆಯಬೇಕೆಂದು ತಮ್ಮ ಆಕ್ರೋಶವನ್ನು ಹೊರಹಾಕಿವೆ. “ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (NRC) ನಾವು ತೀವ್ರವಾಗಿ ವಿರೋಧಿಸುತ್ತಿದ್ದೇವೆ” ಎಂದು ಹೇಳುತ್ತಿದ್ದಾರೆ. ಅಲ್ಲದೆ, ವಿರೋಧಿಸುತ್ತಿರುವ ಪೋಸ್ಟರ್‌ನಲ್ಲಿ ಬರೆದ ಸಾಲುಗಳು ಹೀಗಿವೆ; “ಈ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನಮಗೆ ಸಂಪೂರ್ಣವಾಗಿ ಗೊತ್ತಾಗಿದೆ. ಇದಕ್ಕೆ ಬೆಂಬಲ ಸೂಚಿಸಿ ಎಂದು ತಿಳಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಇಲ್ಲಗೆ ಬರಬೇಕಾದ ಅವಶ್ಯಕತೆ ಇಲ್ಲ” ಎಂದು ಬರೆದಿದೆ.
ಕರಡಿ ಗ್ರಾಮದಲ್ಲಿ ಸ್ಥಳೀಯ ಯುವ ಮುಸ್ಲಿಂ ಸಂಘಟನೆ ಮತ್ತು ಭಾರತೀಯ ಒಕ್ಕೂಟ ಮುಸ್ಲಿಂ ಸಂಘಟನೆ (IUML) ಹೇಳಿದ ಪ್ರಕಾರ, “ನಾವು ಈ ಪ್ರತಿಭಟನೆಯನ್ನು ಪ್ರಾರಂಭಿಸಿದ್ದೇವೆ. ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಒಂದು ಕಿರುಪುಸ್ತಕವನ್ನು ಹಂಚಿ, ಮುಸ್ಲಿಂ ಬಡ ಪುರುಷರು ಮತ್ತು ಮಹಿಳೆಯರು ಸಿಎಎ ಪರವಾಗಿದ್ದಾರೆ” ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
“ಇಲ್ಲಿನ ಕುಟುಂಬಗಳು ಬಿಜೆಪಿ ಕಾರ್ಯಕರ್ತರಿಗೆ ಪೌರತ್ವ ಕಾನೂನನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳುತ್ತಿವೆ. ಆದರೆ ಬಿಜೆಪಿ ಕಾರ್ಯಕರ್ತರು ಸಿಎಎ ಪರ ಇರುವ ಕಿರುಪುಸ್ತಕವನ್ನು ಹಸ್ತಾಂತರಿಸುವಾಗ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ತೆಗೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿದ್ದಾರೆ. ತದನಂತರ ಮುಸ್ಲಿಮರು ಸಿಎಎ ಪರವಾಗಿದ್ದಾರೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತಿದ್ದಾರೆ” ಎಂದು ಈ ಎರಡೂ ಸಂಘಟನೆಗಳು ಹೇಳುತ್ತಿವೆ.
ಬಿಜೆಪಿ ಕಾರ್ಯಕರ್ತರು ಶಾಸಕರು ಮತ್ತು ಸುನ್ನಿ ನಾಯಕರ ಫೋಟೋಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಕೋಳಿಕೋಡ್‌ನ ಕೊಡುವಳ್ಳಿಯ ಪಕ್ಷೇತರ ಶಾಸಕರಾದ ಕರತ್ ರಜಾಕ್ ಮತ್ತು ಸುನ್ನಿ ಯುವ ಚಳವಳಿಯ ರಾಜ್ಯ ಕಾರ್ಯದರ್ಶಿ ನಾಸರ್ ಫೈಜಿ ಕೊಡಥೈ ಅವರ ಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಇಬ್ಬರ ಫೋಟೋಗಳ ಬಗ್ಗೆ ಅವರಲ್ಲೇ ಪ್ರಶ್ನಿಸಿದಾಗ, “ತಮ್ಮನ್ನು ಭೇಟಿ ಮಾಡಲು ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ” ಎಂದು ಹೇಳಿದರು.
ವರದಿಗಳ ಪ್ರಕಾರ, ಜಿಲ್ಲೆಯ ಇತರ ಭಾಗಗಳಲ್ಲೂ ಇದೇ ರೀತಿಯ ಪೋಸ್ಟರ್‌ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
ಈ ಕಾನೂನುಗಳನ್ನು ವಿರೋಧಿಸುವ ಪೋಸ್ಟರ್‌ಗಳನ್ನು ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರ ಮನೆಗಳಲ್ಲಿ ಹಾಕಲಾಗಿದೆ. ಇದೇ ಊರಿನ ಅಜಾದ್ ರವರ ಪ್ರಕಾರ “ಊರಿನ ಕುಟುಂಬಗಳೊಂದಿಗೆ ನಮ್ಮ ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಬಯಸುವುದಿಲ್ಲ. ಆದ್ದರಿಂದ ಪೋಸ್ಟರ್‌ಗಳನ್ನು ಅಂಟಿಸುವ ಮೊದಲು ನಾವು ಅವರ ಅನುಮತಿಯನ್ನು ಪಡೆಯುತ್ತೇವೆ” ಎಂದು ಹೇಳಿದರು.
ನಾನು ಸಿಎಎಯನ್ನು ಬೆಂಬಲಿಸುತ್ತೇನೆ ಎಂದು ನಂಬುವಂತೆ ಜನರನ್ನೆಲ್ಲಾ ದಾರಿ ತಪ್ಪಿಸುತ್ತಾರೆಂದು ನಾನೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶಾಸಕ ರಜಾಕ್ ಹೇಳಿದ್ದಾರೆ. “ನನ್ನನ್ನು ಸ್ವಾಗತಿಸುವವರನ್ನು ನಾನು ಸ್ವಾಗತಿಸುತ್ತೇನೆ. ಆದರೆ ಮುಸ್ಲಿಂ ಮತ್ತು ಎಡಪಂಥೀಯರು ಸಿಎಎಗೆ ಬೆಂಬಲ ನೀಡುತ್ತಿದ್ದಾರೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.
ಕೃಪೆ: ದಿ ವೈರ್