ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್ ಪ್ರವಾಸದಲ್ಲಿದ್ದ ಸಮಯದಲ್ಲಿ ಭದ್ರತೆಯ ಕಾರಣಗಳಿಂದಾಗಿ ದೆಹಲಿಗೆ ಹಿಂದಿರುಗಿದರು. ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆಯಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಿಂಸಾಚಾರಕ್ಕೆ ಪ್ರೇರೆಪಿಸುವ ಟ್ವೀಟ್ ಮಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರವಿ, ʻದೇಶ್ ಕೆ ಗದ್ದರೋನ್ ಕೋ ಗೋಲಿ ಮಾರೋʼ ಎಂದು ಟ್ವೀಟ್ ಮಾಡಿದ್ದಾರೆ. ಅಂದರೆ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹೊರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವರು ಟ್ವೀಟ್ಅನ್ನು ರಿಪೋರ್ಟ್ ಮಾಡಿದ್ದಾರೆ, ಇನ್ನೊಂದಷ್ಟು ಜನ ರಾಜ್ಯ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಇನ್ನು ಕೆಲವರು ಟ್ವೀಟ್ ಅನ್ನು ಈ ಕೂಡಲೇ ಡಿಲೀಟ್ ಮಾಡಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಸಿ.ಟಿ.ರವಿ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಕನ್ನಡ ಪರ ಹೋರಾಟಗಾರ ಗಣೇಶ್ ಚೇತನ್ ರವಿಯನ್ನು ʻಸಂಘಿ ಗೂಂಡಾʼ ಎಂದು ಕರೆದಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಯಿ ಬಾಲಾಜಿ ಟ್ವೀಟ್ ಮಾಡಿದ್ದು ʻಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮತ್ತೊಬ್ಬ ನಾಯಕʼ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ದೆಹಲಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ ಠಾಕೂರ್ ದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ ಇದೇ ಸಾಲುಗಳನ್ನು ಹೇಳಿದ್ದನ್ನು ರವಿ ಇಲ್ಲಿ ಪುನರುಚ್ಚರಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ವಿನಯ್ ಶ್ರೀನಿವಾಸ ರಾಜ್ಯ ಪೊಲೀಸ್ ಇಲಾಖೆ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಟ್ಯಾಗ್ ಮಾಡಿ ʻನಿಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಹಿಂಸಾಚಾರಕ್ಕೆ ಮುಕ್ತ ಕರೆ ನೀಡುತ್ತಿರುವಾಗ ನಮ್ಮ ರಾಜ್ಯದ ಜನರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುdu ಅರ್ಥವಾಗುತ್ತಿದೆʼ ಎಂದು ಹೇಳಿದ್ದಾರೆ.

ಟ್ವಿಟರ್ ಬಳಕೆದಾರ ಫ್ಲಾಯ್ಡ್ ಈ ಕುರಿತು ಟ್ವೀಟ್ ಮಾಡಿದ್ದು, ಇಲ್ಲಿ ಟ್ವಿಟರ್ ನ ನೀತಿ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘನೆಯಾಗಿವೆ. ಈ ಖಾತೆಯನ್ನು ಯಾಕಿನ್ನು ಬ್ಲಾಕ್ ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.