ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ನಡೆಗೆ ‘ಮಿಶ್ರ ಪ್ರತಿಕ್ರಿಯೆ’ ವ್ಯಕ್ತವಾಗಿದೆ. ಖೇಲ್ ರತ್ನ ಪ್ರಶಸ್ತಿ ಮರುನಾಮಕರಣದ ಬೆನ್ನಲ್ಲೇ ‘ನರೇಂದ್ರ ಮೋದಿ ಸ್ಟೇಡಿಯಂ’ ಹೆಸರನ್ನು ಜನರು ಪ್ರಧಾನಿಗೆ ನೆನಪಿಸುತ್ತಿದ್ದಾರೆ. ಇಲ್ಲಿಯೂ ತಮ್ಮ ಕ್ರೀಡಾ ಸ್ಪೂರ್ತಿ ಮೆರೆಯಿರಿ ಎಂದು ಪ್ರಧಾನಿಗೆ ಸಲಹೆಗಳ ಮಹಾಪೂರವೇ ಹರಿಯುತ್ತಿದೆ.
ಕ್ರೀಡಾ ಪ್ರಶಸ್ತಿ ಹಾಗೂ ಕ್ರೀಡಾಂಗಣವನ್ನು ರಾಜಕೀಯ ವ್ಯಕ್ತಿಗಳ ಹೆಸರಿನಿಂದ ಗುರುತಿಸಲೇಬಾರದು ಎಂಬ ವಾದವನ್ನು ಕ್ರೀಡಾಭಿಮಾನಿಗಳು ಮುಂದಿಟ್ಟಿದ್ದಾರೆ. ಪ್ರಧಾನಿಯವರ ಹೊಸ ನಡೆಗೆ, ಆಟಗಾರರಿಂದ ಹಿಡಿದು ಹಲವು ಜನರು ಸೂಚ್ಯವಾಗಿ ನರೇಂದ್ರ ಮೋದಿ ಸ್ಟೇಡಿಯಂ ಹೆಸರನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.

ಭಾರತದ ಉತ್ತಮ ಆಲ್ರೌಂಡರ್’ಗಳಲ್ಲಿ ಒಬ್ಬರಾದ ಇರ್ಫಾನ್ ಪಠಾಣ್ ಅವರು, ಪ್ರಧಾನಿ ನಡೆಗೆ ಪ್ರಶಂಸೆ ವ್ಯಕ್ತಪಡಿಸಿ, ಪ್ರಶಸ್ತಿಗಳಿಗೆ ಕ್ರೀಡಾಳುಗಳ ಹೆಸರನ್ನು ಇಟ್ಟು ಅವರನ್ನು ಸ್ಮರಿಸುವುದು ನಿಜಕ್ಕೂ ಉತ್ತಮವಾದ ಕೆಲಸ. ಇದು ಕ್ರೀಡೆಯಲ್ಲಿ ಆಗಬೇಕಾದ ಹಲವು ಬದಲಾವಣೆಗಳ ಆರಂಭವಾಗಲಿ. ಇದೇ ರೀತಿ ಮುಂಬರುವ ದಿನಗಳಲ್ಲಿ ಕ್ರೀಡಾಂಗಣಗಳ ಹೆಸರನ್ನು ಕೂಡಾ ಆಟಗಾರರ ಹೆಸರಿನೊಂದಿಗೆ ಬದಲಾಯಿಸಬಹುದು ಎಂಬ ನಂಬಿಕೆ ಇದೆ, ಎಂದಿದ್ದಾರೆ.
ಯೂಟ್ಯೂಬರ್ ಧ್ರುವ್ ರಾಠಿ ಅವರು ಕೂಡಾ ಈ ಕುರಿತಾಗಿ ಟ್ವೀಟ್ ಮಾಡಿ, ಇದೊಂದು ನರೇಂದ್ರ ಮೋದಿಯವರ ಅತ್ಯುತ್ತಮ ನಿರ್ಧಾರವಾಗಿದೆ. ಈಗ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಅರುಣ್ ಜೇಟ್ಲಿ ಸ್ಟೇಡಿಯಂ ಅನ್ನು ಕೂಡಾ ಮರುನಾಮಕರಣ ಮಾಡಬಹುದು ಎಂಬ ನಂಬಿಕೆಯಿದೆ. ಎಲ್ಲಾ ರಾಜಕಾರಣಿಗಳ ಹೆಸರನ್ನು ಅಳಿಸಿಬಿಡಿ, ಎಂದು ಹೇಳಿದ್ದಾರೆ.
ಇದರೊಂದಿಗೆ ಹಲವು ಟ್ವಿಟರಾತಿಗಳು ಪ್ರಧಾನಿಗೆ ತಮ್ಮದೇ ಹೆಸರಿನಲ್ಲಿ ಇರುವಂತಹ ಸ್ಟೇಡಿಯಂ ಅನ್ನು ಮರುನಾಮಕರಣ ಮಾಡಿ ಕ್ರೀಡಾಸ್ಫೂರ್ತಿ ಮೆರೆಯುವಂತೆ ಆಗ್ರಹಿಸಿದ್ದಾರೆ.
‘ಇಂದಿರಾ ಕ್ಯಾಂಟಿನ್’ ಹೆಸರು ಬದಲಾಯಿಸುವಂತೆ ಸಿ ಟಿ ರವಿ ಆಗ್ರಹ:
ಭಾರತದಲ್ಲಿ ಮರುನಾಮಕರಣದ ಪರ್ವ ಮುಂದುವರೆಯುತ್ತಲೇ ಇರುವುದರಿಂದ, ಕರ್ನಾಟಕದಲ್ಲಿಯೂ ಇಂದಿರಾ ಕ್ಯಾಂಟಿನ್ ಹೆಸರಿನ ಬದಲಾವಣೆಗೆ ಆಗ್ರಹ ಕೇಳಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಸಿ ಟಿ ರವಿ ಅವರು, ಇಂದಿರಾ ಕ್ಯಾಂಟಿನ್ ಹೆಸರನ್ನು ‘ಅನ್ನಪೂರ್ಣೇಶ್ವರಿ ಕ್ಯಾಂಟಿನ್’ ಎಂದು ಬದಲಾಯಿಸುವಂತೆ ಮನವಿ ಮಾಡಿದ್ದಾರೆ.
“ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇನೆ, ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಹೆಸರನ್ನು ‘ಅನ್ನಪೂರ್ಣೇಶ್ವರಿ ಕ್ಯಾಂಟಿನ್’ ಎಂದು ಬದಲಾಯಿಸಿ. ಕನ್ನಡಿಗರು ಆಹಾರ ಸೇವಿಸುವಾಗ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುವ ಯಾವ ಅಗತ್ಯವೂ ಇಲ್ಲ,” ಎಂದು ಹೇಳಿದ್ದಾರೆ.