ಯಾರು ಏನ್ ಬೇಕಾದ್ರೂ ತಿನ್ನಬಹುದು ಅವರಿಗೆ ಸ್ವಾತಂತ್ರ್ಯ ಇದೆ. ಆದ್ರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನಿ ಅನ್ನೋದು ಭಂಡತನ. ಇಂತಹ ಹೇಳಿಕೆಯನ್ನು ಯಾರೂ ಒಪ್ಪಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ರಾಜ್ಯದಲ್ಲಿ ಸಂಸ್ಕೃತಿ ಪರಂಪರೆ ಇದೆ. ಧಾರ್ಮಿಕ ಶ್ರದ್ಧೆ ಇದೆ. ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನಸಂಖ್ಯೆ ಇದೆ. ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿರುವವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಿಗಳ ಹೇಳಿಕೆಗೆ ಇತರರಿಗೆ ಘಾಸಿ ಆಗಬಾರದು. ಮಠಮಾನ್ಯಗಳಿಗೆ ಸಿದ್ಧರಾಮಯ್ಯ ಭೇಟಿಕೊಡೋದು ತಪ್ಪೇನಿದೆ? ಅಧಿಕಾರಕ್ಕೆ ಬಂದೇ ಬಿಟ್ವಿ ಅನ್ನೋ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್ ಗೆ ಆಘಾತ ಆಗಿದೆ ಎಂದಿದ್ದಾರೆ.
ಇನ್ನು ಧರ್ಮ ಒಡೆಯುವ ಉದ್ದೇಶವಿರಲ್ಲಿಲ್ಲ ಎಂಬ ಪಶ್ಚಾತ್ತಾಪದ ವಿಚಾರವಾಗಿ ಮಾತನಾಡಿದ ವಿಜಯೇಂದ್ರ ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿ ಆಗ್ತಾರೆ ಅನ್ನೋ ಆತಂಕವಾಗಿದೆ. ಯಡಿಯೂರಪ್ಪ ಅವರು ಎಲ್ಲ ಜಾತಿ ಜನಾಂಗ ಒಗ್ಗೂಡಿಸುವ ಕೆಲಸ ಮಾಡಿದ್ರು. ಆದ್ರೆ ಈಗ ಕೆಲ ನಾಯಕರು ಜಾತಿ, ಜಾತಿಯ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಾದಾಗ ಜಾತಿ ಮಧ್ಯೆ ವಿಷ ಬೀಜ ಬಿತ್ತಿದರು. ಈಗ ವೀರ ಸಾವರ್ಕರ್ ಎಂಬ ಕ್ರಾಂತಿಕಾರಿಯನ್ನು ರಸ್ತೆಗೆ ತಂದು ಅವಮಾನ ಮಾಡ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುವುದು ಸರಿ ಅಲ್ಲ ಪ್ರತಿಭಟನೆ ಎಲ್ಲೆ ಮೀರಿ ನಡೆಯಬಾರದು ಎಂದು ಎಚ್ಚರಿಸಿದ್ದಾರೆ.