ಬಿಹಾರದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ʼವಿಜಯೇಂದ್ರ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ಹಣ ಸಂದಾಯ ಮಾಡಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್ ಗೆ ಫಂಡಿಂಗ್ ಮಾಡಲಾಗಿದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ತನಗೆ ನೋಟಿಸ್ ಬಂದಿರುವುದನ್ನು ಒಪ್ಪಿಕೊಂಡ ಯತ್ನಾಳ್, ಬದಲಿಗೆ ತಾನೂ ಬಿಜೆಪಿ ಹೈಕಮಾಂಡಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ʼನನಗೆ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಹನ್ನೊಂದು ಪುಟಗಳ ಉತ್ತರ ನೀಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಾಗೂ ಅವರ ಕುಟುಂಬದಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದು ಯತ್ನಾಳ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲೂ ಕುಟುಂಬ ಹಸ್ತಕ್ಷೇಪ ಇಲ್ಲದ ಸರ್ಕಾರ ಇರಬೇಕು. ಆದರೆ, ಅವರ ಆಶಯದಂತೆ ಇಲ್ಲಿ ಸರ್ಕಾರ ಇಲ್ಲ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ನಲ್ವತ್ತೈದು ಪ್ಯಾರಾದಲ್ಲಿ ಬರೆದಿದ್ದೇನೆ. ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಬಿಜೆಪಿ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇನೆ’ ಎಂದು ಹೇಳಿದ್ದಾರೆ.
‘ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು ಎಂದೂ ಪತ್ರದಲ್ಲಿ ಹೇಳಿದ್ದೇನೆ. ನೋಟಿಸ್ ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲೂ ಕ್ಷಮೆ ಯಾಚಿಸಿಲ್ಲ. ಪ್ರತಿ ಪ್ಯಾರದ ವಿಚಾರಗಳನ್ನು ಹಂತ ಹಂತವಾಗಿ ಮಾಧ್ಯಮದ ಮುಂದೆ ಹೇಳುತ್ತೇನೆ’. ಪತ್ರದಲ್ಲಿ ಸಿಡಿ, ಇಡಿ ಬಗ್ಗೆಯೂ ಉಲ್ಲೇಖಿಸಿದ್ದೇನೆ. ಮಾರಿಷಸ್ ವಿಚಾರವನ್ನು ಬರೆದಿದ್ದೇನೆ. ಮಾರಿಷಸ್ ಗೆ ಯಾಕೆ ಹೋಗಿದ್ದರು. ಎಷ್ಟು ಮಂದಿ ಹೋಗಿದ್ದರು. ಯಾವ ಫ್ಲೈಟ್ ನಲ್ಲಿ ಹೋಗಿದ್ದರು. ಆ ಫ್ಲೈಟ್ ನಂಬರ್ ಏನು ? ಮಾಜಿ ಗೃಹ ಸಚಿವರೊಬ್ಬರ ಪಿಎ ಮೂಲಕ ಮಾರಿಷಸ್ ಗೆ ಹೋಗಿ ಏನೇನು ತಗೊಂಡಿದ್ದಾರೆ. ಇದೆಲ್ಲವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಇದರ ತನಿಖೆ ಮಾಡಲು ಆಗ್ರಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.