ಬೆಂಗಳೂರಿನಲ್ಲಿ ಉದ್ಯಮಗಳು/ ಸ್ಟಾರ್ಟ್-ಅಪ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯುವ ಉದ್ಯಮಿ ರವೀಶ್ ನರೇಶ್ ಟ್ವಿಟರ್ ಮೂಲಕ ತಕರಾರು ಎತ್ತಿದ್ದಾರೆ. ಒಂದು ಕಡೆ ಕೋಮು ಧ್ರುವೀಕರಣದ ರಾಜಕೀಯ ಇನ್ನೊಂದೆಡೆ ಮೂಲಭೂತ ಸೌಕರ್ಯಗಳ ಕೊರತೆ ಬೆಂಗಳೂರಿಗೆ ಹೂಡಿಕೆ ಮಾಡಲು ಉದ್ಯಮಗಳು ಹಿಂದೆ ಮುಂದೆ ನೋಡುವಂತೆ ಮಾಡಿದೆ ಎನ್ನಲಾಗಿದೆ.
ಇದೇ ಹಿನ್ನೆಲೆಯಲ್ಲಿ ಉದ್ಯಮಿ ನರೇಶ್ ಬೊಟ್ಟು ಮಾಡಿ ತೋರಿಸಿರುವ ಸಮಸ್ಯೆಗಳ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಕೈಗಾರಿಕಾ ಸಚಿವ ಬೆಂಗಳೂರು ತೊರೆದು ಹೈದರಾಬಾದ್ ಗೆ ಬರುವಂತೆ ಉದ್ದಿಮೆಗಳಿಗೆ ಸಲಹೆ ನೀಡಿದ್ದಾರೆ. ಇದನ್ನು ಉಲ್ಲೇಖಿಸಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
“HSR/ಕೋರಮಂಗಲದಲ್ಲಿ (ಭಾರತದ ಸಿಲಿಕಾನ್ ವ್ಯಾಲಿ) ಸ್ಟಾರ್ಟ್‌ಅಪ್‌ಗಳು ಈಗಾಗಲೇ ಶತಕೋಟಿ ಡಾಲರ್ ನಷ್ಟು ತೆರಿಗೆಗಳನ್ನು ಉತ್ಪಾದಿಸುತ್ತಿವೆ. ಆದರೂ ನಮ್ಮಲ್ಲಿ ಕೆಟ್ಟ ರಸ್ತೆಗಳು, ಬಹುತೇಕ ದಿನನಿತ್ಯದ ವಿದ್ಯುತ್ ಕಡಿತ, ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಪಾದಚಾರಿ ಮಾರ್ಗಗಳು ಇವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲ ಸೌಕರ್ಯವನ್ನು ಹೊಂದಿವೆ” ಎಂದು ಉದ್ಯಮಿ ರವೀಶ್ ನರೇಶ್ ಟ್ವೀಟ್ ಮಾಡಿದ್ದಾರೆ.

ಉದ್ಯಮಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಕೈಗಾರಿಕಾ ಸಚಿವ ಕೆಟಿಆರ್ ರಾವ್, “ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ಹೈದರಾಬಾದ್‌ಗೆ ಹೊರಡಿ! ನಾವು ಉತ್ತಮ ಭೌತಿಕ ಮೂಲಸೌಕರ್ಯ ಮತ್ತು ಸಮಾನವಾಗಿ ಉತ್ತಮ ಸಾಮಾಜಿಕ ಮೂಲಸೌಕರ್ಯವನ್ನು ಹೊಂದಿದ್ದೇವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾದದ್ದು ಮತ್ತು ನಗರದೊಳಗೆ ಮತ್ತು ಹೊರಗೆ ಹೋಗುವುದು ಹಿತವಾಗಿದೆ. ಮುಖ್ಯವಾಗಿ, ನಮ್ಮ ಸರ್ಕಾರವು ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂಬ ಮೂರು ಮಂತ್ರಗಳ ಮೇಲೆ ಗಮನ ಹರಿಸಿದೆ” ಎಂದು ಪರೋಕ್ಷವಾಗಿ ಬೆಂಗಳೂರಿನ ಅಸಮರ್ಪಕತೆಯನ್ನು ವ್ಯಂಗ್ಯ ಮಾಡಿದ್‌ದಾರೆ.
ತೆಲಂಗಾಣ ರಾಜ್ಯ ಸಚಿವರ ಟ್ವೀಟ್ ಅನ್ನು ಗಮನಿಸಿದ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೇಲಿನ ಎರಡೂ ಟ್ವೀಟನ್ನು ಉಲ್ಲೇಖಿಸಿದ ಖರ್ಗೆ, “ನಿಮ್ಮ ಪಕ್ಷದಿಂದ ಕೆಲವು ಆರ್ಥಿಕ ಜಿಹಾದ್‌ಗಳು ನಮಗೆ ಹೂಡಿಕೆ ಅಥವಾ ಉದ್ಯೋಗಗಳನ್ನು ಪಡೆಯುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಮುಸ್ಲಿಂ ವರ್ತಕರ ವಿರುದ್ಧ ʼಆರ್ಥಿಕ ಜಿಹಾದ್ʼ ಎಂದು ಹೇಳಿಕೆ ನೀಡಿದ್ದನ್ನು ಈ ಮೂಲಕ ಖರ್ಗೆ ಟೀಕಿಸಿದ್ದಾರೆ.
“ಅಭಿನಂದನೆಗಳು, ಮುಖ್ಯಮಂತ್ರಿಯವರೇ, ಉತ್ತಮ ಮೂಲಸೌಕರ್ಯಕ್ಕಾಗಿ ಮಾತ್ರವಲ್ಲದೆ ಉತ್ತಮ “ಸಾಮಾಜಿಕ” ಮೂಲಸೌಕರ್ಯಕ್ಕಾಗಿ ಹೈದರಾಬಾದ್‌ಗೆ ತೆರಳಲು ನಮ್ಮ ನೆರೆ ರಾಜ್ಯ ಸ್ಟಾರ್ಟ್‌ಅಪ್‌ಗಳಿಗೆ ಹೇಳುತ್ತಿದೆ. ನಿಮ್ಮ ಪಕ್ಷದಿಂದ ಇನ್ನೂ ಕೆಲವು ಆರ್ಥಿಕ ಜಿಹಾದ್‌ಗಳು ನಮಗೆ ಹೂಡಿಕೆಗಳು ಅಥವಾ ಉದ್ಯೋಗಗಳನ್ನು ಪಡೆಯುವುದಿಲ್ಲ ಎಂದು ಖಚಿತಪಡಿಸುತ್ತದೆ.” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.










