ಬೆಳಗಾವಿ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯನೇ ಹತ್ಯೆಗೈದಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಗೋಕಾಕ್ ನಗರದ ನಿವಾಸಿ ರಾಜು ಝಂವರ ಮೃತ ದುರ್ದೈವಿ.
ಉದ್ಯಮಿ ಫೆ.10ರಂದು ಗೋಕಾಕ್’ನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಫೆ.11ರಂದು ಗೋಕಾಕ್ ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ರಾಜು ಅವರ ದ್ವಿಚಕ್ರವಾಹನ ಗೋಕಾಕ್ ನಗರದ ಸಿಟಿ ಆಸ್ಪತ್ರೆ ಬಳಿ ಪತ್ತೆಯಾಗಿತ್ತು.
ಅಂತೆಯೇ ಪೊಲೀಸರು ಉದ್ಯಮಿ ರಾಜು ಝಂವರ್’ಗೆ ಕೊನೆ ಬಾರಿ ಕರೆ ಮಾಡಿದ್ದವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿದೆ.
ತಾನು ರಾಜುವನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಘಟಪ್ರಭಾ ನದಿ ಬಲದಂಡೆ ಕಾಲುವೆಯಲ್ಲಿ ಎಸಿದಿರುವುದಾಗಿ ವೈದ್ಯ ಡಾ.ಸಚಿನ್ ಶಿರಗಾವಿ ಹೇಳಿದ್ದಾನೆ.
ಸದ್ಯ ಉದ್ಯಮಿ ರಾಜುಗಾಗಿ ಕೊಳವಿ ಬಳಿ ಘಟಪ್ರಭಾ ನದಿ ಬಲದಂಡೆ ಕಾಲುವೆಯಲ್ಲಿ ಶೋಧ ಕಾರ್ಯ ನಡೆದಿದೆ.