ಬೆಂಗಳೂರು: ರಾಜ್ಯದಲ್ಲಿ ತೈಲ ಬೆಲೆ ಹಾಗೂ ಬಸ್ ಟಿಕೆಟ್ ದರ ಏರಿಕೆಯ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗ್ಯಾರೆಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡುತ್ತಿಲ್ಲ. ಆರ್ಥಿಕ ಮೂಲಗಳಾದ ಮದ್ಯ ಮತ್ತು ತೈಲದಿಂದ ಹೆಚ್ಚಿನ ಆದಾಯ ಬಂದರೆ, ಅಭಿವೃದ್ಧಿ ಮಾಡಲು ಸಾದ್ಯ ಎಂಬ ಕಾರಣಕ್ಕೆ ತೈಲ ಬೆಲೆ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ನೆರೆ ಹೊರೆಯ ರಾಜ್ಯಗಳಲ್ಲಿ ತೈಲ ಬೆಲೆ ಹೆಚ್ಚಿದೆ. ನಮ್ಮಲ್ಲಿ ಅಲ್ಲಿಗಿಂತ ದರ ಕಡಿಮೆ ಇದೆ. ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತೈಲ ಬೆಲೆ ಇಲ್ಲಿಗಿಂತ ಅಧಿಕವಾಗಿದೆ. ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಕೇಂದ್ರದ ವಿರುದ್ಧ ಧರಣಿ ಮಾಡಬೇಕು ಎಂದು ಹೇಳಿದ್ದಾರೆ.
ಬಡವರು, ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬೆಲೆ ಕಡಿಮೆ ಮಾಡಬೇಕಿತ್ತು. ಕೇಂದ್ರ ಸರ್ಕಾರ ಜಿಎಸ್ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆ ಪಾಲು ಕಡಿಮೆ ಆಯಿತು. ಸ್ಟ್ಯಾಂಪ್ ಡ್ಯೂಟಿ, ಮೋಟರ್ ತೆರಿಗೆ ಬಿಟ್ಟು ಎಲ್ಲ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಕರ್ನಾಟಕಕ್ಕೆ 18,6000 ಕೋಟಿ ರೂ. ನಷ್ಟವಾಗಿದೆ. ಕರ್ನಾಟಕಕ್ಕೆ ಬರುವ ತರಿಗೆ ಕಡಿಮೆಯಾದರೂ, ರಾಜ್ಯದ ಪರ ಬಿಜೆಪಿಯವರು ಒಂದು ದಿನವೂ ಮಾತನಾಡಿಲ್ಲ ಎಂದು ಗುಡುಗಿದ್ದಾರೆ.