ಅಪಘಾತಕ್ಕೀಡಾದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 2 ಮಕ್ಕಳು ಸೇರಿ7 ಮಂದಿ ಸಜೀವದಹನಗೊಂಡ ಆಘಾತಕಾರಿ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಸಂಭವಿಸಿದೆ.
ಗೋವಾದಿಂದ ಖಾಸಗಿ ಬಸ್ ಹೈದರಾಬಾದ್ ಗೆ ತೆರಳುತ್ತಿದ್ದಾಗ ಚಾಲಕನ ವೇಗದ ಅಜಾಗರೂಕತೆ ಚಾಲನೆಯಿಂದ ಬಸ್ ಪಲ್ಟಿಯಾಗಿ ಟೆಂಪೊಗೆ ಡಿಕ್ಕಿ ಹೊಡೆದಿದೆ. ಕಮಲಾಪುರ ಹೊರವಲಯದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಬಸ್ ಟೆಂಪೊ ಅಪಘಾತದ ನಂತರ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿ ಉರಿಯಲು ಆರಂಭಿಸಿದೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.
ಗೂಡ್ಸ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಖಾಸಗಿ ಬಸ್ ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸುಮಾರು 15 ಮಂದಿಗೆ ಗಾಯಗಳಾಗಿದ್ದು 12 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್ ನಿಂದ ಗೋವಾಕ್ಕೆ ಪ್ರವಾಸ ಹೋಗಿದ್ದರು. ಹಿಂತಿರುಗಿ ಬರುವಾಗ ಈ ಅಪಘಾತ ಸಂಭವಿಸಿದೆ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಾಸ್ತಿ ಸ್ಪೀಡ್ನಲ್ಲಿ ಹೋಗದಂತೆ ಚಾಲಕನಿಗೆ ಪ್ರಯಾಣಿಕರು ಹೇಳಿದ್ದರಂತೆ. ದಯವಿಟ್ಟು ಸ್ಪೀಡ್ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರೂ, ಪ್ರಯಾಣಿಕರ ಮಾತು ಕೇಳದೆ ಚಾಲಕ ಜೋರಾಗಿ ಬಸ್ಸು ಓಡಿಸುತ್ತಿದ್ದ. ಬಸ್ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಹೇಳಿಕೆ ನೀಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಖಾಸಗಿ ಬಸ್ಸು-ಟೆಂಪೊ ಡಿಕ್ಕಿಯಾಗಿ ನಂತರ ಬಸ್ಸು ಹೊತ್ತಿ ಉರಿದ ದುರ್ಘಟನೆಯಲ್ಲಿ 7 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಒಂದೇ ಕುಟುಂಬದ 35 ಮಂದಿ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿಯಿದೆ, ದುರ್ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕಳುಸಿದ್ದು, ಸಂಪೂರ್ಣ ಮಾಹಿತಿ ಸಿಕ್ಕಿದ ನಂತರ ಮಾತನಾಡುತ್ತೇನೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.