ಹುಮನಾಬಾದ್ (ಬೀದರ್ ಜಿಲ್ಲೆ): ಪಟ್ಟಣ ಹೊರವಲಯದ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಶುಕ್ರವಾರ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದ ಮೇರೆಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಕಲ್ಲೂರ್ ದೂರು ನೀಡಿದ್ದರು.
ಶುಕ್ರವಾರ ಕಲ್ಲೂರ್ ಗ್ರಾಮದಿಂದ ಹುಮನಾಬಾದ್‌ಗೆ ಬರುವ ರಸ್ತೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಪಿಸ್ತೂಲ್ ಹಿಡಿದುಕೊಂಡು ನಿಂತಿದ್ದರು. ಸಮೀಪ ಹೋಗಿ ನೋಡುತ್ತಿದ್ದಂತೆ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ದರು. ಕಾನೂನಿನ ಅರಿವು ಇದ್ದರೂ ಸಾರ್ವಜನಿಕರ ಮಧ್ಯೆ ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಭಾನುವಾರ ನಸುಕಿನ ಜಾವ ರಾಯ ಚೂರಿನ ಚೌಕಿಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್’ಐ ಮಂಜನಗೌಡ ಪಾಟೀಲ ತಿಳಿಸಿದ್ದಾರೆ.
ಮತ್ತೊಂದು ಎಫ್‌ಐಆರ್
ಚಿಟಗುಪ್ಪ: ಸಮೀಪದ ಹುಮನಾಬಾದ್ ತಾಲ್ಲೂಕಿನ ಬಸವ ತೀರ್ಥ ಗ್ರಾಮದ ಬಸವ ತೀರ್ಥ ಮಠದಸಿದ್ದಲಿಂಗ ಸ್ವಾಮೀಜಿ ಅವರ ವಿರುದ್ಧ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಕುರಿತಂತೆ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ನಮ್ಮ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದನ್ನು ತಡೆಯಲು ಹೋದಾಗ ಹಲವರು ಹಲ್ಲೆ ನಡೆಸಿದ್ದು, ನನ್ನ ಪತ್ನಿ ಮೇಲೆ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಾಲ್ಲೂಕಿನ ಕಲ್ಲೂರ ತಾಂಡಾ ನಿವಾಸಿ ಸೋಮನಾಥ ಲಕ್ಷ್ಮಣ ಪವಾರ ಅವರು ನೀಡಿದ ದೂರಿನನ್ವಯ ಪೊಲೀಸ್ ಸಬ್ ಇನ್’ಸ್ಪೆಕ್ಟರ್ ಮಹೇಂದ್ರಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಸ್ವಾಮೀಜಿ ಅವರು ನಮ್ಮ ಹೊಲದಲ್ಲಿ ಉಳುಮೆ ಮಾಡಲು ಮೂರು ಟ್ರ್ಯಾಕ್ಟರ್, ಒಂದು ಜೆಸಿಬಿ ತಂದಾಗ ತಡೆಯಲು ಹೋದೆವು. ಸ್ವಾಮೀಜಿ ಪರವಾಗಿ ರೇವಣಸಿದ್ದ ಮಾಣಿಕಪ್ಪ ಜಮಾದಾರ, ಅಶೋಕ ಮಾಸ್ಟರ್ ಹಾಗೂ ಇತರರು ಸೇರಿ ನನ್ನ ಮೇಲೆ ಹಲ್ಲೆ ಮಾಡಿ, ಪತ್ನಿಯ ಸೀರೆ ಎಳೆದು ಹೊಡೆಸಿದ್ದಾರೆ. ತಕ್ಷಣ ನನ್ನ ಮಕ್ಕಳಾದ ಬಸವರಾಜ್, ಅನಿಲ ಸ್ಥಳಕ್ಕೆ ಬಂದು ನಮ್ಮನ್ನು ಹುಮನಾಬಾದ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.