ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 2022 ರ ಮಂಗಳವಾರದ ಕೇಂದ್ರ ಬಜೆಟ್‌ನಲ್ಲಿ ಕೃಷಿ, ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯದ ಬಗ್ಗೆ ಒತ್ತು ನೀಡಲಿ ಎಂಬುದು ಬಹುಪಾಲು ಭಾರತೀಯರ ಒತ್ತಾಸೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಅಭಿವೃದ್ಧಿಯ ಮುನ್ನೋಟಕ್ಕೆ ಸಂಬಂಧಿಸಿದಂತೆ ಅದರಲ್ಲೂ ಕೃಷಿ ಕುರಿತು ಶೇ.33 ಭಾರತೀಯರು ಹೆಚ್ಚಿನ ಒಲವು ತೋರಿದ್ದಾರೆ. ಶೇ.31 ಜನರು ರಸ್ತೆಗಳು ಮತ್ತು ಹೆದ್ದಾರಿಗಳು ಪ್ರಮುಖ ಅಭಿವೃದ್ಧಿಯಾಗಬೇಕು ಎಂದು ತಿಳಿಸಿರುವುದಾಗಿ ಸಮುದಾಯ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ಹೇಳಿದೆ.
2022 ರ ಬಜೆಟ್ ನ ಪ್ರಾಥಮಿಕ ನಿರೀಕ್ಷೆಗಳೇನು ಎಂಬುದನ್ನು ತಿಳಿಯುವ ಉದ್ದೇಶದಿಂದ ಈ ಸರ್ವೇ ಮಾಡಲಾಗಿದ್ದು, ಶೇ. 47 ರಷ್ಟು ಭಾರತೀಯರು ಸಾಮಾಜಿಕವಾಗಿ ಬಜೆಟ್ ಇರಲಿ ನಿರೀಕ್ಷೆ ಪಟ್ಟಿದ್ದಾರೆ. ಈ ಸಮೀಕ್ಷೆಯು 344 ವಿವಿಧ ಜಿಲ್ಲೆಗಳಲ್ಲಿ ಒಟ್ಟು 28,000 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಅವರಲ್ಲಿ ಶೇ.66 ರಷ್ಟು ಪುರುಷರಾಗಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತೆರಿಗೆ ಕಾನೂನಿನಲ್ಲಿ ತಿದ್ದುಪಡಿಗಳನ್ನು ತರಲು ನಿರೀಕ್ಷಿಸಲಾಗಿದೆ. ಇದು ಕೃಷಿ, ರಸ್ತೆಗಳು ಮತ್ತು ಹೆದ್ದಾರಿಗಳು, ಟೆಲಿಕಾಂ ಮತ್ತು ಇಂಟರ್ನೆಟ್, ವಿಮಾನ ನಿಲ್ದಾಣಗಳಂತಹ ಆರ್ಥಿಕ ವಲಯಗಳ ಬೆಳವಣಿಗೆಗೆ ಒತ್ತು ನೀಡುವ ನಿರೀಕ್ಷೆ ಇದೆ.
ಲೋಕಲ್ ಸರ್ಕಲ್ಸ್ ಸಮೀಕ್ಷೆಯು ತನ್ನ ಕೇಳುಗರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದರಲ್ಲಿ ಮೊದಲನೆಯದು ಸಾಮಾಜಿಕ ಆದ್ಯತೆಗಳ ಕುರಿತು ನಾಗರಿಕರಿಗೆ ಪ್ರಶ್ನೆಗಳನ್ನು ಕೇಳಿದೆ. ಇದಕ್ಕೆ 9,541 ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ.47ರಷ್ಟು ಜನರು ಆರೋಗ್ಯಕ್ಕೆ ಒತ್ತು ನೀಡಲು ಸೂಚಿಸಿದ್ದಾರೆ. ಶೇ.19 ರಷ್ಟು ಜನರು ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ ಆಯ್ಕೆ ಮಾಡಿದ್ದಾರೆ. ಶೇ.6 ರಷ್ಟು ಜನರು ಶುದ್ಧ ಗಾಳಿ ಮತ್ತು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.
ಎರಡನೆಯ ಪ್ರಶ್ನೆಯು ಅಭಿವೃದ್ಧಿಯ ಮುನ್ನೋಟ್ ಕುರಿತು ಇದೆ. ಇದಕ್ಕೆ 9,701 ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷಿ ಮತ್ತು ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಹೇಳಲಾದ ಆದ್ಯತೆಯ ಹೊರತಾಗಿಯೂ ಶೇ.14 ರಷ್ಟು ಜನರು ಟೆಲಿಕಾಂ ಮತ್ತು ಇಂಟರ್ನೆಟ್ ಕ್ಷೇತ್ರ ಅಭಿವೃದ್ಧಿಯಾಗಲಿ ಎಂಬುದನ್ನು ಬಯಸಿದ್ದಾರೆ. ಶೇ. 3ರಷ್ಟು ಜನರು ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.