2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಶಿವಮೊಗ್ಗದಲ್ಲಿ ಚುನಾವಣಾ ರಣತಂತ್ರಕ್ಕೆ ಮುಂದಾಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಲಿಂಗಾಯತ ಮುಖಂಡರ ಸಭೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ʻ ಶಿವಮೊಗ್ಗದಲ್ಲಿ ಲಿಂಗಾಯತ ಸಮುದಾಯದ ಸಭೆಗಳನ್ನು ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿ ನೂರಕ್ಕೆ ನೂರು ನಾವು ಗೆಲ್ಲುತ್ತೇವೆ. ಹಿಂದುಳಿದ ಸಮಾಜದ ಎಲ್ಲಾ ವರ್ಗಗಳು ಎಲ್ಲ ಜಾತಿಗಳು ಕೂಡ ನೂರಕ್ಕೆ 90ರಷ್ಟು ಬಿಜೆಪಿಗೆ ಬೆಂಬಲ ನೀಡುತ್ತಾರೆ. ನಮ್ಮ ಸಮಾಜದ ಜನ ನಮ್ಮ ಜೊತೆ ಗಟ್ಟಿಯಾಗಿ ನಿಂತಿರುವುದರಿಂದ ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ. ಕೊನೆಯ ಎರಡು ದಿನ ಪುನಃ ಶಿವಮೊಗ್ಗಕ್ಕೆ ಬರುತ್ತೇನೆ. ಮತ್ತೊಂದು ಬಾರಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಏನೇ ಇರಲಿ ಶಿವಮೊಗ್ಗ ನಮಗೆ ಪ್ರತಿಷ್ಠೆಯ ಕಣ. ಇದನ್ನ ನಾವು ಗೆದ್ದೇ ಗೆಲ್ಲಬೇಕು. ಬಿಜೆಪಿಗೆ ರಾಜ್ಯದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ನಾವು 130 ಸೀಟು ಗೆಲ್ಲೋದಕ್ಕೆ ಯಾವುದೇ ಅನುಮಾನ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಇದರ ಜೊತೆ ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿ ಹಲವರು ರಾಜ್ಯ ಪ್ರವಾಸದಲ್ಲಿದ್ದಾರೆ. ಇದೆಲ್ಲದರ ಪರಿಣಾಮ ನಾವು ಗೆಲ್ಲುತ್ತೇವೆ. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲʼಅಂತ ಬಿಎಸ್ ಯಡಿಯೂರಪ್ಪ ಹೇಳಿದರು.

ಸಿದ್ದರಾಮಯ್ಯ ವೀರಶೈವ ಲಿಂಗಾಯತ ಸಿಎಂ ಭ್ರಷ್ಟಾಚಾರಿಗಳು ಇಂದು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಸಿದ ಯಡಿಯೂರಪ್ಪ ಹರಿಹಾಯ್ದರು. ʻಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಅದನ್ನ ನಾನು ಖಂಡಿಸುತ್ತೇನೆ. ಇದಕ್ಕೆ ತಕ್ಕ ಉತ್ತರವನ್ನು ಲಿಂಗಾಯತ ಸಮುದಾಯ ಚುನಾವಣೆಯಲ್ಲಿ ಕೊಡುತ್ತದೆ. ಇತ್ತೀಚಿಗೆ ವಿಪಕ್ಷ ನಾಯಕ ಎಂಬ ಅರಿವು ಇಲ್ಲದೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಅದು ಅವರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ಜೊತೆಗೆ ಯಾರೂ ಹೋಗುವುದಿಲ್ಲ. ಸೋಲು ನಿಶ್ಚಿತ ಹಾಗಾಗಿ ಹಗರವಾಗಿ ಟೀಕೆ ಮಾಡುತ್ತಿದ್ದಾರೆ. ಜನ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಬಿಜೆಪಿ ಹಿರಿಯ ನಾಯಕರು ಟಿಕೆಟ್ ವಂಚಿತರಾಗಲು ವೀರಶೈವ ಲಿಂಗಾಯತರು ಬಿಜೆಪಿಯಲ್ಲಿ ಟಿಕೆಟ್ ಪಡೆಯದಿರಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಾರಣ ಎಂಬ ಆರೋಪಕ್ಕೆ ಕುರಿತು ಪ್ರತಿಕ್ರಿಸಿದ ಯಡಿಯೂರಪ್ಪ ʻಇಂತಹ ಹೇಳಿಕೆಗಳು ಹುಚ್ಚುತನದ ಪರಮಾವಧಿ. ಸಂತೋಷ್ ಬಿಜೆಪಿ ಪಕ್ಷಕ್ಕೆ ಹಗಲು – ರಾತ್ರಿ ದುಡಿಯುತ್ತಿದ್ದಾರೆ. ಪಕ್ಷ ಸಂಘಟನೆಗೆ ಹವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ. ಅವರು ಯಾವಾಗಲೂ ಬಿಜೆಪಿ ಪರ ಗಟ್ಟಿ ನಿಂತು ರಾಜ್ಯದಂತೆ ಓಡಾಡುತ್ತಿರುವ ಹಿರಿಯ ಮುಖಂಡರು. ಅವರ ಬಗ್ಗೆ ಟೀಕೆ ಮಾಡೋದಕ್ಕೆ ಯಾರಿಗೂ ಯೋಗ್ಯತೆ ಇಲ್ಲ. ಅದಕ್ಕೆ ಅರ್ಥವೂ ಇಲ್ಲ ಎಂದರು.