ಕಳೆದ ಕೆಲವು ತಿಂಗಳುಗಳಿಂದ, ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪ್ರಾಮುಖ್ಯತೆ ಕುಸಿದಿದ್ದರಿಂದ, ಬಸವರಾಜ ಬೊಮ್ಮಾಯಿ ಹೊಸ ಪ್ಯಾನ್-ಕರ್ನಾಟಕ ಬಿಜೆಪಿ ನಾಯಕರಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕೋಟಾಗಳ ಭರವಸೆ ಸೇರಿದಂತೆ ಅನೇಕ ಕ್ರಮಗಳನ್ನು ಬೊಮ್ಮಾಯಿ ಕೈಗೊಂಡಿದ್ದಾರೆ.
ಕೋಟಾ ಭರವಸೆಗಳನ್ನು ಈಡೇರಿಸಲು ಬೊಮ್ಮಾಯಿ ಅವರು ಮೀಸಲಾತಿಯನ್ನು ಹೇಗೆ ವಿಂಗಡಿಸುತ್ತಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ, ಲಿಂಗಾಯತ, ವೊಕ್ಕಲಿಗ ಮತ್ತು ದಲಿತ, ಬುಡಕಟ್ಟು ಸಮುದಾಯಗಳಿಗೆ ನೀಡಿದ ಭರವಸೆಗಳು 2023 ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಬೊಮ್ಮಾಯಿ ಪಾಲಿಗೆ ನಿರ್ಣಾಯಕ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಯಡಿಯೂರಪ್ಪ ಅವರೇ ಬಿಜೆಪಿಯಿಂದ ರಾಜಕೀಯವಾಗಿ ಬದಿಗೆ ಸರಿದು ಪಕ್ಷದಿಂದ ಅನುಮತಿಗಾಗಿ ಕಾಯುತ್ತಿರುವ ಈ ಹೊತ್ತಿನಲ್ಲಿ ಜಾತಿ ಕುತಂತ್ರದ ಮೂಲಕ ಲಿಂಗಾಯತ ಅಗ್ರಮಾನ್ಯ ನಾಯಕನೆಂಬ ಹೆಗ್ಗಳಿಕೆಗೆ ಬೊಮ್ಮಾಯಿ ಮುಂದಾಗಿರುವುದು ಯಡಿಯೂರಪ್ಪನವರಿಗೆ ತೃಪ್ತಿ ತಂದಿಲ್ಲ ಎಂಬ ಗುಸುಗುಸು ಬಿಜೆಪಿ ವಲಯದಲ್ಲಿದೆ. ಬಿಎಸ್‌ವೈ ಪುತ್ರ ಬಿ ವೈ ವಿಜಯೇಂದ್ರ ತಮ್ಮ ನಿಜವಾದ ಉತ್ತರಾಧಿಕಾರಿ ಎಂಬಂತೆ ಬಿಎಸ್‌ವೈ ಪ್ರಯತ್ನಿಸಿದ್ದರೂ ಬಿಜೆಪಿ ಅದಕ್ಕೆ ಅವಕಾಶ ಕೊಡದಿರುವುದು ಹಾಗೂ ಬೊಮ್ಮಾಯಿ ಲಿಂಗಾಯತರ ನಾಯಕರಾಗಿ ಹೊರ ಹೊಮ್ಮಲು ಪ್ರಯತ್ನ ಪಡುತ್ತಿರುವುದು “ಇತ್ತೀಚಿನ ದಿನಗಳಲ್ಲಿ ಇಬ್ಬರು ನಾಯಕರ ನಡುವಿನ ಬಾಂಧವ್ಯ ಹಳಸಲು” ಕಾರಣವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬೊಮ್ಮಾಯಿ ಸರಕಾರವು ಇಲ್ಲಿಯವರೆಗೆ ಜಾರಿಗೊಳಿಸಿದ ಮೀಸಲಾತಿ ಕಾಯ್ದೆಯಲ್ಲಿ ದಲಿತರ ಕೋಟಾವನ್ನು 15 ರಿಂದ 17 ಪರ್ಸೆಂಟ್‌ಗೆ ಹೆಚ್ಚಿಸಲಾಗಿದೆ, ಪರಿಶಿಷ್ಟ ಪಂಗಡಗಳ ಕೋಟಾವನ್ನು ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸಲಾಗಿದೆ ಮತ್ತು ಮರು ವರ್ಗೀಕರಣವನ್ನು ಒಳಗೊಂಡಿದೆ. ಲಿಂಗಾಯತರು ಮತ್ತು ವೊಕ್ಕಲಿಗರು ಹೊಸ OBC ವರ್ಗಗಳಾಗಿ ಮಾರ್ಪಡಿಸಲಾಗಿದೆ.
“ಒಕ್ಕಲಿಗರಿಂದ ಮೀಸಲಾತಿಗಾಗಿ ಯಾವುದೇ ಆಂದೋಲನ ನಡೆದಿಲ್ಲ, ಆದರೆ ಬೊಮ್ಮಾಯಿ ಅವರ ಒಕ್ಕಲಿಗ ಸಚಿವ ಸಂಪುಟದ ಸಹೋದ್ಯೋಗಿಗಳು ಜ್ಞಾಪಕ ಪತ್ರವನ್ನು ಮಂಡಿಸಿದ ತಕ್ಷಣ, ಸಿಎಂ ಮೀಸಲಾತಿ ಬೇಡಿಕೆಗೆ ಒಪ್ಪಿಗೆ ನೀಡಿದರು. ಬೊಮ್ಮಾಯಿ ತನ್ನನ್ನು ತಾನು ಪ್ಯಾನ್ ಕರ್ನಾಟಕದ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಇದು” ಎಂಬ ಟೀಕೆಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ.
ಈ ಮೀಸಲಾತಿ ಸರ್ಕಸ್ ಯಾವುದೇ ಸ್ಪಷ್ಟತೆಯನ್ನು ನೀಡುವ ಬದಲು ಎಲ್ಲಾ ಸಮುದಾಯಗಳಲ್ಲಿ ಹೆಚ್ಚಿನ ಗೊಂದಲವನ್ನು ಸೃಷ್ಟಿಸಿದೆ. ಅಲ್ಲದೆ, ಇದು ಯಾವ ರಾಜಕೀಯ ಲಾಭಾಂಶವನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಲಿಂಗಾಯತರ ಪ್ರಭಾವಿ ಪಂಚಮಸಾಲಿ ಉಪಪಂಗಡ ಈಗಾಗಲೇ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಒಬಿಸಿಯ 2ಎ ವರ್ಗಕ್ಕೆ ಸೇರಿಸಲು ಸಮುದಾಯವು ಎರಡು ವರ್ಷಗಳ ಸುದೀರ್ಘ ಆಂದೋಲನವನ್ನು ನಡೆಸುತ್ತಿದೆ. ಡಿಸೆಂಬರ್ 29 ರಂದು, ಬೊಮ್ಮಾಯಿ ಕ್ಯಾಬಿನೆಟ್ ಈ ಬೇಡಿಕೆಗೆ ಸಮ್ಮತಿಸಲಿಲ್ಲ, ಆದರೆ ಲಿಂಗಾಯತರನ್ನು 3B ವರ್ಗದಿಂದ ಹೊಸ 2D ವರ್ಗಕ್ಕೆ ವರ್ಗಾಯಿಸಿತು. EWS ಕೋಟಾದ ಮೂಲಕ ಹೆಚ್ಚಳವಾಗುವವರೆಗೆ ಅವರ ಮೀಸಲಾತಿ 5 ಪ್ರತಿಶತದಲ್ಲಿಯೇ ಇರುತ್ತದೆ. 2023ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಪರಿಣಾಮ ಬೀರಲಿದೆ ಎಂದು ಪಂಚಮಸಾಲಿಗಳು ಗುರುವಾರ ಎಚ್ಚರಿಸಿದ್ದಾರೆ.
ಜನಸಂಖ್ಯೆಯ ಸುಮಾರು 17 ಪ್ರತಿಶತದಷ್ಟಿರುವ ಲಿಂಗಾಯತರಲ್ಲಿ, ಪಂಚಮಸಾಲಿಗಳು ಉತ್ತರ ಕರ್ನಾಟಕದ ಹಲವು ಸ್ಥಾನಗಳಲ್ಲಿ ನಿರ್ಣಾಯಕರಾಗಬಹುದು. ಇತ್ತೀಚಿನ ಚುನಾವಣೆಗಳಲ್ಲಿ ಲಿಂಗಾಯತರು ಹೆಚ್ಚಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಮತ್ತು ಯಡಿಯೂರಪ್ಪ ಅವರನ್ನು ತಮ್ಮ ಪ್ರಮುಖ ನಾಯಕ ಎಂದು ಪರಿಗಣಿಸಿದ್ದಾರೆ.
“ನೀವು ಎಲ್ಲಾ ಜನರನ್ನು ಕೆಲವು ಸಮಯದಲ್ಲಿ ಮತ್ತು ಕೆಲವರನ್ನು ಎಲ್ಲಾ ಸಮಯದಲ್ಲೂ ಮರುಳು ಮಾಡಬಹುದು, ಆದರೆ ನೀವು ಎಲ್ಲಾ ಜನರನ್ನು ಎಲ್ಲಾ ಸಮಯದಲ್ಲೂ ಮರುಳು ಮಾಡಲು ಸಾಧ್ಯವಿಲ್ಲ” ಎಂದು ಬಿಜೆಪಿ ಶಾಸಕ ಮತ್ತು ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರ ಕಟು ವಿಮರ್ಶಕ ಬಸವರಾಜ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಕೋಟಾ ಆಂದೋಲನ ಯಶಸ್ವಿಯಾದರೆ ಲಿಂಗಾಯತ ನಾಯಕನಾಗಿ ಪ್ರಾಮುಖ್ಯತೆ ಕಳೆದುಕೊಳ್ಳುವ ಭಯದಲ್ಲಿರುವ ಯಡಿಯೂರಪ್ಪ ಅವರನ್ನು ಮೆಚ್ಚಿಸಲು ಬೊಮ್ಮಾಯಿ ಪಂಚಮಸಾಲಿ ಕೋಟಾ ಬೇಡಿಕೆಗೆ ಮಣಿಯಲಿಲ್ಲ ಎಂದು ಯತ್ನಾಳ್ ಆರೋಪಿಸಿದ್ದಾರೆ. ನಾಯಕನ ಮಗ ಮತ್ತು ನಾಯಕನನ್ನು ಮೆಚ್ಚಿಸಲು ನೀವು ನಿರ್ಧಾರ ತೆಗೆದುಕೊಂಡರೆ, ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಯತ್ನಾಳ್ ಯಡಿಯೂರಪ್ಪ ಮತ್ತು ಮಗನನ್ನು ಕೆಣಕಿದ್ದಾರೆ.
ಯಡಿಯೂರಪ್ಪ ಅವರನ್ನು ಮುಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ವದಂತಿಯ ನಡುವೆ ಯಡಿಯೂರಪ್ಪ ಅವರೇ ಇತ್ತೀಚಿನ ವಾರಗಳಲ್ಲಿ ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.
ಅದಾಗ್ಯೂ, ಬಿಎಸ್‌ವೈ ಅವರು “ರಾಜಕೀಯದಲ್ಲಿ ನನ್ನನ್ನು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷವನ್ನು ಕಟ್ಟಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ, ”ಎಂದು ಅವರು ಕಳೆದ ತಿಂಗಳು ಹೇಳಿದ್ದರು.
ಅದೇ ವೇಳೆ ಸಿಎಂ ಬೊಮ್ಮಾಯಿ ಅವರು, “ಬಿಎಸ್‌ವೈ ನಮ್ಮ ಸರ್ವೋಚ್ಚ ನಾಯಕ. ಅವರ ಜತೆ ಸಮಾಲೋಚನೆ ನಡೆಸಿದ ನಂತರವೇ ಎಲ್ಲ ರಾಜಕೀಯ ಯೋಜನೆ ರೂಪಿಸಲಾಗುವುದು. ಅವರ ಆಶೀರ್ವಾದ ನಮಗಿದೆ. ನಾವು ತಂದೆ-ಮಗನ ಸಂಬಂಧವನ್ನು ಹೊಂದಿದ್ದೇವೆ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯದ ಪ್ರಶ್ನೆಯೇ ಇರಬಾರದು.” ಎಂದು ಹೇಳಿ ತಿಪ್ಪೆ ಸಾರಿಸಿದ್ದರು.
ಈ ನಡುವೆ ಪ್ರತಿಪಕ್ಷಗಳು ಕೂಡ ಬಿಜೆಪಿಯ ಆತ್ಮ ವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನದಲ್ಲಿ ಹಠಕ್ಕೆ ಬಿದ್ದಿದ್ದು, ಬಿಜೆಪಿಯಲ್ಲಿ ʼಎಲ್ಲವೂ ಸರಿಯಿಲ್ಲʼ ಎಂಬ ಸಂದೇಶವನ್ನು ರವಾನಿಸುತ್ತಿದೆ. ʼಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿದ್ದಾರೆ. ಈಗ ಯಡಿಯೂರಪ್ಪನವರ ಸ್ಥಿತಿ ಏನು? ಅವರನ್ನು ಬಿಜೆಪಿ ನಾಯಕತ್ವ ಹೇಗೆ ನಡೆಸಿಕೊಳ್ಳುತ್ತಿದೆ?ʼ ಎಂದು ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಲಿಂಗಾಯತ ಸಮುದಾಯದವರೊಂದಿಗೆ ಈ ವಾರ ನಡೆದ ಸಂವಾದದಲ್ಲಿ ಪ್ರಶ್ನಿಸಿದ್ದಾರೆ.