ತಮ್ಮನ್ನು ‘ಗ್ರೇಟ್ ಲಯರ್’ ಎಂದು ಕರೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, “ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೆಸ್ ಪಡೆದಿರಿ ಎನ್ನುವುದನ್ನು ಜನರಿಗೆ ತಿಳಿಸಿ” ಎಂದು ಹೇಳಿದ್ದಾರೆ.
ಸಿಂಧಗಿ ಉಪ ಚುನಾವಣೆಯ ನಿಮಿತ್ತ ಕ್ಷೇತ್ರದಲ್ಲಿ ಕೊನೆ ದಿನದ ಪ್ರಚಾರ ನಡೆಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು ಅವರು, “ನನ್ನನ್ನು ಸಿದ್ದರಾಮಯ್ಯ ‘ಗ್ರೇಟ್ ಲಯ್ಯರ್’ ಎಂದು ಕರೆದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಸತ್ಯವಂತರು ಅಲ್ಲವೆ? ದಿನ ಬೆಳಗಾದರೆ ಸತ್ಯ ಹರಿಶ್ಚಂದ್ರ ಅವರ ಮನೆ ಮುಂದೆ ಓಡಾಡುತ್ತಾರೆ ಇರಬೇಕು. ಹಾಗಾದರೆ ಅವರು ಯಡಿಯೂರಪ್ಪ ಅವರಿಂದ ಚುನಾವಣೆ ಸೂಟ್ ಕೇಸ್ ಪಡೆದಿಲ್ಲ ಎಂದು ಹೇಳಲಿ” ಎಂದು ಸವಾಲು ಹಾಕಿದ್ದಾರೆ.
2009ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ, ಅದರಲ್ಲೂ ಮೊದಲ ಹಂತದ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಮಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನಿಮ್ಮ ಆಪ್ತರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಹಣ ಪಡೆದುಕೊಳ್ಳಲಿಲ್ಲವೆ? ಆ ಮೂಲಕ ನೀವು ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕೆಲಸ ಮಾಡಿದಿರೋ ಇಲ್ಲವೋ ಎಂಬುದನ್ನು ಜನರ ಮುಂದೆ ಇಡಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರವಾಗಿ ಹೇಳಿದ್ದಾರೆ.
ಮೊದಲು ಆ ವಿಷಯವನ್ನು ಬಹಿರಂಗವಾಗಿ ಹೇಳಿ. ಆಮೇಲೆ ನಾನು ಗ್ರೇಟ್ ಲಯರ್ರೋ ಅಥವಾ ನೀವು ಗ್ರೇಟ್ ಲಯರ್ರೋ ಎನ್ನುವುದು ಗೊತ್ತಾಗುತ್ತದೆ ಎಂದು ಪ್ರತಿಪಕ್ಷ ನಾಯಕನಿಗೆ ಮಾಜಿ ಮುಖ್ಯಮಂತ್ರಿಗಳು ನೇರ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಅವರು ಆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ರಾಜಕೀಯದಲ್ಲಿ ಇಷ್ಟು ದೂರ ಬೆಳೆದು ಬಂದಿದ್ದಾರೆ. ಅವರು ಒಮ್ಮೆ ಆ ತಾಯಿಯನ್ನು ಮನಸ್ಸಿನಲ್ಲೇ ಸ್ಮರಿಸಿ, ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಾನು ಯಡಿಯೂರಪ್ಪ ಅವರಿಂದ ಹಣ ಪಡೆದಿಲ್ಲ ಎಂದು ಹೇಳಲಿ ಎಂದರು ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.