ವಿಜಯೇಂದ್ರ ಸಂಬಂಧಿ ವಿರುದ್ಧ ಲೋಕಾಯುಕ್ತ ದಾಳಿಗೆ ಸಂಬಂಧ ಪ್ರತಿಕ್ರಿಯಿಸಿರುವ ಯತ್ನಾಳ್, ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದರು.
ಈ ಕುರಿತು ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ಅವರು ಎಷ್ಟು ಭ್ರಷ್ಟರು ಎಂದು ಹೇಳಬೇಕೆ? ಯಾರು ಕರ್ನಾಟಕವನ್ನು ಲೂಟಿ ಹೊಡೆದಿದ್ದಾರೆ, ಕರ್ನಾಟಕವನ್ನು ಲೂಟಿ ಮಾಡಿ ಸಿಂಗಾಪುರ ಮಾರಿಶಸ್ ನಲ್ಲಿ ಹೂಡಿಕೆ ಮಾಡಿದ್ದಾರೆ ಅದರ ಬಗ್ಗೆ ತನಿಖೆ ಆಗಬೇಕು ಹಾಗೂ ಜೈಲಿಗೆ ಹೋಗಬೇಕು. ಭ್ರಷ್ಟರು ಭ್ರಷ್ಟರೇ, ನಾನು ಭ್ರಷ್ಟಾಚಾರ ಮಾಡಿದರೆ ನಾನೂ ಭ್ರಷ್ಟನೇ ಎಂದು ಒತ್ತಾಯಿಸಿದ್ದಾರೆ.
ಉಮೇಶ್ ಕಂಡೆಕ್ಟರ್ ಯಾರು ಅಂತ ನಮಗೆ ಗೊತ್ತಿಲ್ವಾ? ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ? ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ, ಪಾಕಿಸ್ತಾನದವರ ಸರ್ಕಾರ ಬಂದಂತಾಗಿದೆ. ಇಂತಹ ಸರ್ಕಾರ. ಇದೇ ಉದ್ಧಟತನ ಮುಂದುವರಿಸಿದರೆ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದರು.













