ಕರ್ನಾಟಕದ ರಾಜಕಾರಣ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಸಿಎಂ ಬದಲಾವಣೆಯ ಕುರಿತ ಸುದ್ದಿಗಳ ದಟ್ಟವಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಜೆಡಿಎಸ್’ನಿಂದ ಬಿಜೆಪಿಗೆ ಬಂದಿರುವ ವಲಸಿಗ ಸಚಿವರು ಅತಂತ್ರವಾಗುತ್ತಾರೆನೋ ಎಂಬ ಭಯದಲ್ಲಿದ್ದಾರೆ.
ಇದಕ್ಕೆ ಪೂರಕವೆಂಬಂತೆ, ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕೆಲವು ಸಚಿವರು ಸಿಎಂ ಯಡಿಯೂರಪ್ಪ ಅವರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ನೀಡಿದ ಭರವಸೆಯ ಮೇರೆಗೆ ಈ ಹಿಂದೆ ಅಸ್ಥಿತ್ವದಲ್ಲಿ ಇದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ 17 ಜನ ಶಾಸಕರಲ್ಲಿ ಬಹುತೇಕರು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈಗ ಒಂದು ವೇಳೆ ಯಡಿಯೂರಪ್ಪನವರು ಸಿಎಂ ಸ್ಥಾನ ತೊರೆದಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ಬರುವ ಸಾಧ‌್ಯತೆಯಿದೆ ಎಂಬ ಭಯ ಅವರನ್ನು ಕಾಡುತ್ತಿರುವ ಹಾಗೆ ಕಾಣುತ್ತಿದೆ.
ವಲಸಿಗ ನಾಯಕರಿಗೆ ಸಚಿವ ಸ್ಥಾನ ನೀಡುವ ಕುರಿತು ಬಿಜೆಪಿಯ ಮೂಲ ನಾಯಕರಲ್ಲಿಯೇ ಅಸಮಾಧಾನವಿತ್ತು. ಬಹುತೇಕ ಸಚಿವ ಸ್ಥಾನ ಆಕಾಂಕ್ಷಿಗಳು ನಿರಾಸೆ ಅನುಭವಿಸಿದ್ದರು. ಯಡಿಯೂರಪ್ಪ ಹಾಗೂ ವಲಸಿಗರ ವಿರುದ್ದ ಬಹಿರಂಗವಾಗಿಯೇ ಕಿಡಿಕಾರಿದ್ದರು. ಇವೆಲ್ಲದರ ನಡುವೆಯೂ, ಸಿಎಂ ಯಡಿಯೂರಪ್ಪನವರು ತಾವು ಕೊಟ್ಟ ಮಾತಿನಂತೆ ಬಹುತೇಕರನ್ನು ಸಚಿವರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದರು.
ಈಗ ತಾವಿರುವ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ವಲಸಿಗ ನಾಯಕರು, ಗುರುವಾರ ಸಿಎಂ ಬಿ ಎಸ್ ವೈ ನೀಡಿರುವ ಹೇಳಿಕೆಯ ಕುರಿತು ಸ್ಪಷ್ಟನೆ ಕೇಳಿದ್ದಾರೆಂದು NDTV ವರದಿ ಮಾಡಿದೆ. ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ್, ಸುಧಾಕರ್ ಸೇರಿದಂತೆ ಹಲವು ಸಚಿವರು ಸಿಎಂ ಅನ್ನು ಭೇಟಿಯಾಗಿದ್ದರು.
“ಕ್ಯಾಬಿನೆಟ್ ಮೀಟಿಂಗ್ ಮುಗಿದ ಬಳಿಕ, ಕೆಲವು ಸಚಿವರು ಸಿಎಂ ಕಚೇರಿಗೆ ತೆರಳಿದ್ದರು. ಗುರುವಾರ ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದರು,” ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ನಾವು ಯಡಿಯೂರಪ್ಪನವರನ್ನು ನಂಬಿ ಬಿಜೆಪಿಗೆ ಬಂದಿದ್ದೆವು. ಇದರೊಂದಿಗೆ ಪಕ್ಷದ ಸಿದ್ದಾಂತವನ್ನು ಕೂಡಾ ಒಪ್ಪಿಕೊಂಡಿದ್ದೇವೆ. ನಾವು ಬಿಜೆಪಿಗೆ ಬರಲೂ ಇದೇ ಮುಖ್ಯ ಕಾರಣ. ವೈಯಕ್ತಿಕ ಲಾಭ ಅಥವಾ ಅಧಿಕಾರದ ಆಸೆ ಅಲ್ಲ, ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ರಾಜಿನಾಮೆ ನೀಡಿದರೆ, ವಲಸಿಗ ನಾಯಕರೂ ರಾಜಿನಾಮೆ ನೀಡುತ್ತಾರೆ ಎಂಬ ಸುದ್ದಿಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ ಸಿ ಪಾಟೀಲ್, ನಾವು ಯಾಕೆ ರಾಜಿನಾಮೆ ನೀಡಬೇಕು? ಏನಾಗಿದೆ? ಯಾವುದೇ ಕಾರಣವಿಲ್ಲದೆ ರಾಜಿನಾಮೆ ಏಕೆ ನೀಡಬೇಕು? ಇಲ್ಲಿ ಯಾರೂ ಹುಚ್ಚರಿಲ್ಲ. ಯಾರೂ ಮೂರ್ಖರಿಲ್ಲ. ಎಲ್ಲರೂ ಗೌರವಸ್ಥರೇ. ನಾವೆಲ್ಲಾ ಶಾಸಕರು, ಸಚಿವರು. ಏಕೆ ರಾಜಿನಾಮೆ ನೀಡಬೇಕು, ಹೇಳಿದ್ದಾರೆ.
ಒಟ್ಟಿನಲ್ಲಿ ಮೈತ್ರಿ ಸರ್ಕಾರದ ಬುಡ ಉರುಳಿಸಿದ್ದ ಜಂಪಿಂಗ್ ನಾಯಕರ ಬುಡಕ್ಕೆ ಕೊಡಲಿ ಏಟು ಬೀಳುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆಯಾದರೆ, ಯಡಿಯೂರಪ್ಪನವರು ಕೊಟ್ಟ ಮಾತನ್ನು ಹೊಸ ನಾಯಕರು ಉಳಿಸಿಕೊಳ್ಳುತ್ತಾರೆ ಎಂಬ ಕುರಿತು ದೃಢವಾದ ನಂಬಿಕೆಯೂ ಇಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರ ವಲಸಿಗ ನಾಯಕರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.









