ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಎಸ್‌ವೈಗಿಂತ ಅವರ ಪುತ್ರ ಯುವ ಬಿಜೆಪಿ ನಾಯಕ ಬಿವೈ ವಿಜಯೇಂದ್ರ ಅವರೇ ಮುಖ್ಯವಾದರಾ ಎನ್ನುವ ಪ್ರಶ್ನೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗಿಂತ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಮೊದಲ ಪ್ರಾಮುಖ್ಯತೆ ನೀಡಿ ಅವರಿಂದ ಬೊಕ್ಕೆ ಸ್ವೀಕರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅಮಿತ್ ಶಾ ಅವರು ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ನೀಡಿ ಉಪಹಾರ ಸೇವಿಸಿದ್ದು, ಅದಕ್ಕೂ ಮುನ್ನ ಅಮಿತ್ ಶಾ ರನ್ನು ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಸ್ವಾಗತಿಸಿದ್ದಾರೆ.

ಈ ವೇಳೆ ಅಮಿತ್ ಶಾಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಲು ಮುಂದಾದ ಬಿಎಸ್‌ವೈ ರನ್ನು ತಡೆದ ಅಮಿತ್ ಶಾ, ಬೊಕ್ಕೆಯನ್ನು ವಿಜಯೇಂದ್ರ ಕೈಗೆ ಕೊಡಿಸಿ, ವಿಜಯೇಂದ್ರ ಕೈಯಿಂದ ಬೊಕ್ಕೆಯನ್ನು ಸ್ವೀಕರಿಸಿ, ವಿಜಯೇಂದ್ರ ಬೆನ್ನು ತಟ್ಟಿದ್ದಾರೆ. ನಂತರ ಬಿಎಸ್‌ವೈ ಅವರು ಬೇರೆ ಬೊಕ್ಕೆಯನ್ನು ಅಮಿತ್ ಶಾ ಗೆ ನೀಡಿ ಸ್ವಾಗತಿಸಬೇಕಾಯಿತು. ಕೇಂದ್ರ ಗೃಹ ಸಚಿವರ ಈ ನಡೆಯು ಬಿಎಸ್‌ವೈರನ್ನು ಒಂದು ಕ್ಷಣ ವಿಚಲಿತಗೊಳಿಸಿರುವುದು ವಿಡಿಯೋದಲ್ಲಿ ನೋಡಬಹುದು.
ಬಿಎಸ್‌ವೈಗಿಂತ ವಿಜಯೇಂದ್ರ ಅವರಿಗೆ ಶಾ ಮೊದಲ ಪ್ರಾಶಸ್ತ್ಯ ಕೊಟ್ಟಿರುವುದು ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಲಿಂಗಾಯತರ ಮತವನ್ನು ಬಿಜೆಪಿಯಲ್ಲೇ ಹಿಡಿದಿಡಲು ಬಿಎಸ್‌ವೈ ಕುಟುಂಬದ ಅಗತ್ಯ ಮನಗಂಡು ಅಮಿತ್ ಶಾ ವಿಜಯೇಂದ್ರ ಅವರನ್ನು ಗಣನೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ












