ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಇಂದು (ಗುರುವಾರ) ದಾಳಿ ನಡೆಸಿದ್ದಾರೆ. ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ನಲ್ಲಿರುವ ಉಮೇಶ್ ಮನೆ ಮತ್ತು ಕಚೇರಿ ಸೇರಿ ಅವರಿಗೆ ಸಂಬಂಧಪಟ್ಟ ಇತರೆ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅವರಿಗೆ ಉಮೇಶ್ ಪಿಎ ಆಗಿ ಕೆಲ ಮಾಡುತ್ತಿದ್ದರು. ಅಲ್ಲದೆ, ಬಿಎಸ್ವೈ ಪುತ್ರ ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು ಎಂದು ತಿಳೀದು ಬಂದಿದೆ.
ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ಉಮೇಶ್.!
BSY ಮುಖ್ಯಮಂತ್ರಿ ಪಿಎ ಆಗುವ ಮೊದಲು ಉಮೇಶ್ ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ, ಡೆಪ್ಯುಟೇಷನ್ ಮೇಲೆ ಬಿಎಸ್ವೈ ಆಪ್ತನಾಗಿ ಕೆಲಸ ಮಾಡುತ್ತಿದ್ದರು.
ಭಾಷ್ಯಂ ಸರ್ಕಲ್ ಬಳಿ ಬಾಡಿಗೆ ಮನೆಯೊಂದರಲ್ಲಿ ಉಮೇಶ್ ವಾಸವಾಗಿದ್ದರು, ಇಂದು ಐಟಿ ಅಧಿಕಾರಿಗಳು ಅದೇ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
100 ಕೋಟಿಗೂ ಅಧಿಕ ಆಸ್ತಿ?
ಉಮೇಶ್ ಅವರು ಬಿಎಸ್ವೈ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಭೇಟಿಗೆ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಲಭಿಸಿರುವ ಮಾಹಿತಿ ಪ್ರಕಾರ, ಬಿಎಸ್ವೈ ಪಿಎ ಆದ ಬಳಿಕ ಉಮೇಶ್ ಅವರ ಆಸ್ತಿ 300% ಹೆಚ್ಚಳಗೊಂಡಿದ್ದು, ಬರೋಬ್ಬರಿ 100 ಕೋಟಿಗಳಷ್ಟು ಆಸ್ತಿ ಮೌಲ್ಯ ಇದೆ ಎಂದು ಹೇಳಲಾಗಿದೆ.