ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಎಬಿಪಿ- ಸಿವೋಟರ್ ಚುನಾವಣಾ ಸಮೀಕ್ಷೆ ಹೊರಬಂದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ನಡುಕ ಉಂಟಾಗಿದೆ ಎನ್ನಲಾಗಿದೆ. ಸಮರ್ಥ ನಾಯಕತ್ವದ ಕೊರತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಮೊದಲೇ ಹಿನ್ನೆಡೆ ಉಂಟಾಗಿದ್ದು, ಬಿಎಸ್‌ವೈಯನ್ನು ಮತ್ತೆ ಎಳೆದು ತಂದಿದೆ. ಸಮೀಕ್ಷಾ ವರದಿ ಬಹಿರಂಗಗೊಂಡ ಒಂದು ದಿನದ ಬಳಿಕ ಬಿಎಸ್‌ವೈ ಮೂಲಕ ತುರ್ತು ಪತ್ರಿಕಾಗೋಷ್ಟಿಯನ್ನು ಬಿಜೆಪಿ ನಡೆಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‌ವೈ ಈ ಬಾರಿ ಯಾರು ಏನೇ ಅಂದ್ರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ. ನರೇಂದ್ರ ಮೋದಿ ಸರ್ಕಾರ ಹಾಗೂ ಬೊಮ್ಮಾಯಿ ಸರ್ಕಾರದ ಜನಪರ ಯೋಜನಗೆಳು ಬಿಜೆಪಿಗೆ ಸ್ಪಷ್ಟ ಬಹುಮತ ತಂದುಕೊಡಲಿದೆ. ಇನ್ನೆರಡು ದಿನಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಜನರ ಮನೆ ಮನೆ ತಲುಪಿ ನಮ್ಮ ಸಾಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ ಎಂದಿದ್ದಾರೆ.
ಚುನಾವಣಾ ಸಮೀಕ್ಷೆ ಕಾಂಗ್ರೆಸ್ ಪರ ಬಂದಿರುವುದನ್ನು ಉಲ್ಲೇಖಿಸಿದ ಬಿಎಸ್‌ವೈ, “ನಿನ್ನೆ ಮಾಧ್ಯಮಗಳಲ್ಲಿ ಸಮೀಕ್ಷೆ ವರದಿ ನೋಡಿದೆ. ನಾನು 50 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ, ಜನರ ನಾಡಿ ಮಿಡಿತ ಗೊತ್ತಿದೆ, ನಾವು ಮೂರು ಸಮೀಕ್ಷೆಗಳನ್ನು ನಡೆಸಿದ್ದೇವೆ. ಮೂರೂ ಸಮೀಕ್ಷೆಗಳೂ ಬಿಜೆಪಿ ಸಂಪೂರ್ಣ ಬಹುಮತದಿಂದ ಬರುತ್ತದೆ ಎಂದು ರಿಪೋರ್ಟ್ ಕೊಟ್ಟಿದೆ, ಅದು ವಾಸ್ತವವೂ ಹೌದು” ಎಂದು ಹೇಳಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಉಂಟಾದ ಗಲಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಂಜಾರ ಸಮುದಾಯದೊಂದಿಗೆ ಮಾತನಾಡುತ್ತೇವೆ. ಮೀಸಲಾತಿ ಬದಲಾವಣೆ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟಾಗಿದೆ, ಮುಸ್ಲಿಂ ಬಾಂಧವರಿಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡೋಕೆ ಸಾಧ್ಯ ಇಲ್ಲ ಎಂದು ಅವರನ್ನು ಆರ್ಥಿಕ ಹಿಂದುಳಿದ ವರ್ಗದ ಅಡಿ ತಂದಿದ್ದೇವೆ, ಈ ಬಗ್ಗೆ ತಪ್ಪು ಗ್ರಹಿಕೆ ಬೇಡ ಎಂದು ಬಿಎಸ್‌ವೈ ಹೇಳಿದ್ದಾರೆ.
ಒಂದೆರಡು ಕಡೆ ಬಿಟ್ಟರೆ ಉಳಿದ ಎಲ್ಲಾ ಕಡೆಯಲ್ಲಿ ಮೀಸಲಾತಿ ಬದಲಾವಣೆಗೆ ಉತ್ತಮ ಬೆಂಬಲ ಸಿಕ್ಕಿದೆ. ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿರುವವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ.
ಮುಸ್ಲಿಮರ ಮೀಸಲಾತಿಯನ್ನು ಮರಳಿ ತರುತ್ತೇವೆ ಎಂದು ಕಾಂಗ್ರೆಸ್ ಹೇಳಬಾರದು. ಅಧಿಕಾರಕ್ಕೆ ಬಾರದವರು ಸುಮ್ಮನೆ ಆಸೆ ಹುಟ್ಟಿಸಬಾರದು. ಬಿಜೆಪಿ ಬಾಯಿ ಮಾತಲ್ಲಿ ಹೇಳುವುದಲ್ಲ, ಮಾಡಿ ತೋರಿಸಿದೆ. ಡಿಕ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿ ಅವರ ಸ್ಥಾನ ಯಾವುದು ಇರಬೇಕೆನ್ನುವುದು ಚರ್ಚೆ ಮಾಡಲಿ ಎಂದು ಬಿಎಸ್‌ವೈ ಹೇಳಿದರು.






