ಹೆಚ್ಚು ಕಮ್ಮಿ ಮೂರನೇ ಅಲೆ ಮುನ್ಸೂಚನೆ ಸಿಕ್ಕಂತಿದೆ. ಈಗಾಗಲೇ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ 31 ಓಮೈಕ್ರಾನ್ ಕೇಸ್ ಗಳು ಹಾಗೂ ಒಂದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ಈ ಮೂಲಕ ದಿನದಿಂದ ದಿನಕ್ಕೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನೈಟ್ ಕರ್ಫ್ಯೂ ಜಾರಿ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಈ ವಿಚಾರದ ಕುರಿತು ನಾಳೆ ಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಲು ತೀರ್ಮಾನ ಮಾಡಿದ್ದಾರೆ.
ನಾಳೆ ಅಧಿಕಾರಿಗಳ ಸಭೆ ಕರೆದ ಸಿಎಂ ಬೊಮ್ಮಾಯಿ
ಡಿಸೆಂಬರ್ 2ರಂದು ಇಡೀ ದೇಶದಲ್ಲೇ ಚೊಚ್ಚಲ ಕೇಸ್ ವಕ್ಕರಿಸಿದ್ದು ಬೆಂಗಳೂರಲ್ಲಿ. ಆದಾದ ಬಳಿಕ ದಿನ ಕಳೆದಂತೆ ಒಂದೊಂದೇ ಓಮೈಕ್ರಾನ್ ಪ್ರಕರಣಗಳು ಬೆಳಕಿಗೆ ಬರಲು ಶುವಿಟ್ಟುಕೊಂಡಿತ್ತು. ಇಡೀ ರಾಜ್ಯದಲ್ಲಿ ಸದ್ಯ 31 ಓಮೈಕ್ರಾನ್ ಸೋಂಕಿತರಿದ್ದಾರೆ. ಬೆಂಗಳೂರಿನಲ್ಲಿ ಮತ್ತು ಮಂಗಳೂರಿನಲ್ಲಿ ಈ ಪೈಕಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಆಘಾತಕಾರಿ ಅಂಶವೆಂದರೆ ಈ ಓಮೈಕ್ರಾನ್ ಕೊರೋನಾದ ಇತರೆ ರೂಪಾಂತರಿಗಿಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಕ್ಷಣ ಮಾತ್ರದಲ್ಲಿ ಏರಿಕೆಯಾಗುವ ಸಂಭವವೂ ಇದೆ. ಈ ಹಿನ್ನೆಲೆ ತಾಂತ್ರಿಕ ಸಲಹಾ ಸಮಿತಿಯಿಂದ ಈಗೀಂದಿಗಲೇ ಕೆಲವೊಂದು ಕಠಿಣ ಕ್ರಮ ಜಾರಿ ಮಾಡಲು ಸರ್ಕಾರಕ್ಕೆ ಸಲಹೆಗಳು ಹೋಗಿದೆ. ಈ ಪೈಕಿ ನೈಟ್ ಕರ್ಫ್ಯೂ ಕೂಡ ಒಂದು.
ನಾಳೆ ಓಮೈಕ್ರಾನ್ ನೈಟ್ ಕರ್ಫ್ಯೂ ಭವಿಷ್ಯ ನಿರ್ಧಾರ
ತಜ್ಞರು ಓಮೈಕ್ರಾನ್ ಐದಾರು ಪ್ರಕರಣಗಳು ಬಂದಾಗಲೇ ನೈಟ್ ಕರ್ಫ್ಯೂ ಸೇರಿದಂತೆ ಹಲವು ಟಫ್ ರೂಲ್ಸ್ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಸದ್ಯಕ್ಕೆ ಅದರ ಅಗತ್ಯವಿಲ್ಲ ಎಂದಿದ್ದ ಕಾರಣ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಮಾಡಿರಲಿಲ್ಲ. ಇದೀಗ ಸಂಖ್ಯೆ ಏರುತ್ತಲೇ ಇರುವ ಕಾರಣ ನೈಟ್ ಕರ್ಫ್ಯೂ ಬಗ್ಗೆ ಸರ್ಕಾರ ಚಿಂತಿಸಿದೆ. ಇದೇ ವಿಚಾರವಾಗಿ ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನೈಟ್ ಕರ್ಫ್ಯೂ ಹಾಗೂ ಇನ್ನಿತರ ವಿಚಾರಗಳ ಕುರಿತು ಚರ್ಚೆಯಾಗಲಿದೆ.
ನೈಟ್ ಕರ್ಫ್ಯೂ ಜಾರಿ ಮಾಡಿದರೆ ಉತ್ತಮ ಎಂದ ಬಿಜೆಪಿ ಶಾಸಕ ಗರುಡಾಚಾರ್
ರಾಜ್ಯದಲ್ಲಿ ನೈಟ್ ಕರ್ಫ್ಯೂ ಬೇಕೋ ಬೇಡವೋ ಎಂಬ ಚರ್ಚೆಯ ಮಧ್ಯೆಯೇ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನೈಟ್ ಕರ್ಫ್ಯೂ ಪರವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ನೈಟ್ ಕರ್ಫ್ಯೂ ಜಾರಿಯಾದರೆ ಉತ್ತಮ. ತುಂಬಾ ವೇಗವಾಗಿ ಹರಡೋ ವೈರಸ್ ಓಮೈಕ್ರಾನ್. ಇದರ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದರೆ ಸೂಕ್ತ. ಆದರೆ ಎಷ್ಟು ಸಮಯ ಅನ್ನೋದು ಮುಖ್ಯ. ರಾತ್ರಿ 10ರ ನಂತರ ನೈಟ್ ಕರ್ಫ್ಯೂ ಜಾರಿ ಮಾಡಿದ್ರೆ ಸೂಕ್ತ ಎಂಬುವುದು ನನ್ನ ಅಭಿಪ್ರಾಯ ಎಂದು ಗರುಡಾಚಾರ್ ಹೇಳಿದ್ದಾರೆ.

ತಜ್ಞರು ಆರಂಭದಲ್ಲಿ ಕೊಟ್ಟ ಎಚ್ಚರಿಕೆ ಈಗ ನಿಜವಾಗ ತೊಡಗಿದೆ. ಆರಂಭದಲ್ಲೇ ಮದುವೆ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ ಜನ ದಟ್ಟಣೆ ವಿಧಿಸುವುದು, ಅಂತರರಾಷ್ಟ್ರೀಯ ಹಾಗೂ ಅಂತರ್ ರಾಜ್ಯ ಪ್ರಯಾಣಿಕರ ಮೇಲೆ ಸೂಕ್ಷ್ಮ ನಿಗಾ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ವಹಿಸಿದ್ದರೆ ಒಳ್ಳೆಯದ್ದಿತ್ತು ಎಂಬ ಅಭಿಪ್ರಾಯವೂ ಈಗ ವ್ಯಕ್ತವಾಗುತ್ತಿದೆ. ಹೀಗೆ ಈ ಎಲ್ಲಾ ಕಾರಣದಿಂದ ಸಿಎಂ ಬೊಮ್ಮಾಯಿ ನಡೆಸಲಿರುವ ಓಮೈಕ್ರಾನ್ ಸಭೆ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ನೈಟ್ ಕರ್ಫ್ಯೂ ಬಗ್ಗೆಯೂ ನಿರ್ಧಾರವಾಗಲಿದೆ.