ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭಾನುವಾರ (ಸೆಪ್ಟೆಂಬರ್ 10) ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನಕ್, “ಭಾರತದೊಂದಿಗಿನ ಸಂಬಂಧದ ಬಗ್ಗೆ ಹೆಮ್ಮೆ ಇದೆ. ಹೆಮ್ಮೆಯ ಹಿಂದೂವಾಗಿ ಭಾರತ ಮತ್ತು ಇಲ್ಲಿಯ ಜನರೊಂದಿಗೆ ಸದಾ ಸಂಪರ್ಕವನ್ನು ಇರಿಸಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಶನಿವಾರ (ಸೆಪ್ಟೆಂಬರ್ 9) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸುವ ಹಾಗೂ ಹೂಡಿಕೆ ಹೆಚ್ಚಿಸುವ ಯೋಜನೆಗಳ ಕುರಿತು ಸಮಾಲೋಚಿಸಿದರು.