ಜೆರುಸಲೇಮ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು ಗುರುವಾರ 12ನೇ ದಿನಕ್ಕೆ ಕಾಲಿಟ್ಟಿದ್ದು, ಮೃತಪಟ್ಟವರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಇಸ್ರೇಲ್ಗೆ ಭೇಟಿ ನೀಡಿ, ಉಗ್ರರ ನಿರ್ನಾಮಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರಕ್ಕೆ ಪೂರ್ಣ ಬೆಂಬಲ ಘೋಷಿಸಿದರು.

ಜೆರುಸಲೇಮ್ನಲ್ಲಿ ನೆತನ್ಯಾಹು ಅವರ ಜತೆ ಸಭೆ ನಡೆಸಿದ ಸುನಕ್, ”ಹಮಾಸ್ ಉಗ್ರರ ನಿರ್ನಾಮದ ವಿಚಾರದಲ್ಲಿ ಬ್ರಿಟನ್ ರಾಷ್ಟ್ರವು ಇಸ್ರೇಲ್ಗೆ ಪೂರ್ಣ ಬೆಂಬಲ ಘೋಷಿಸುತ್ತದೆ. ಇಸ್ರೇಲ್ಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಇದೇ ವೇಳೆ ಅದು, ಮಾನವೀಯ ನೆಲೆಯಲ್ಲಿ ಗಾಜಾಪಟ್ಟಿಯಲ್ಲಿರುವ ನಾಗರಿಕರಿಗೆ ನೆರವು ನೀಡುವ ಅಗತ್ಯವೂ ಇದೆ,” ಎಂದು ಹೇಳಿದರು.