ಬೆಳಗಾವಿ :
ರಾಜಕೀಯ ಒತ್ತಡ, ಬೆದರಿಕೆಗಳು, ಗುಂಪು ಗಲಾಟೆಯ ನಡುವೆಯೂ ಅಕ್ರಮ ಗಣಿಗಾರಿಕೆಗೆ ತಲೆಬಾಗದೆ, ಸ್ಥಳದಲ್ಲೇ ಕಠಿಣ ಕ್ರಮ ಕೈಗೊಂಡ ಮಹಿಳಾ ಭೂ ವಿಜ್ಞಾನಿ ಬಿಂದನ್ ಪಾಟೀಲ ಅವರ ದಿಟ್ಟ ನಡೆ ಬೆಳಗಾವಿ ಮಾತ್ರವಲ್ಲದೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಬೆಳಗಾವಿ ತಾಲ್ಲೂಕಿನ ಇನಾಂ ಬಡಸ್ ಗ್ರಾಮ ಹದ್ದಿಯಲ್ಲಿ ಅಕ್ರಮವಾಗಿ ಲ್ಯಾಟರೈಟ್ ಗಣಿಗಾರಿಕೆ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಿಂದನ್ ಪಾಟೀಲ, ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ತಾಕೀತು ಮಾಡಿದರು. ಆದರೆ ರಾಜಕೀಯ ಪ್ರಭಾವದ ಹೆಸರೇಳಿಸಿ ಅಕ್ರಮ ಮುಂದುವರಿಸಲು ಯತ್ನಿಸಿದಾಗ, ಆಕ್ರೋಶಗೊಂಡ ಅವರು ಅಕ್ರಮಕ್ಕೆ ಬಳಸಲಾಗುತ್ತಿದ್ದ ಜೆಸಿಬಿ ಯಂತ್ರದ ಮೇಲೆ ಕಲ್ಲೆಸೆದು ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿದರು.

ವಿಡಿಯೊವನ್ನು ಆರೋಪಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೂ, ಅದು ಅಧಿಕಾರಿಯ ತೇಜೋವಧೆಯ ಬದಲು ಜನಮನ ಗೆದ್ದ ಧೈರ್ಯದ ಸಾಕ್ಷಿಯಾಗಿ ವೈರಲ್ ಆಗಿದೆ. ಮಹಿಳಾ ಅಧಿಕಾರಿಯ ನಿರ್ಭೀತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ.

“ಎಚ್ಚರಿಕೆಯ ನಂತರವೂ ಅಕ್ರಮ ಮುಂದುವರಿಸಿದರು” – ಬಿಂದನ್ ಪಾಟೀಲ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿದ ಬಿಂದನ್ ಪಾಟೀಲ, “ತಿಂಗಳ ಹಿಂದೆ ನಡೆದ ಘಟನೆ ಇದು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಅಕ್ರಮ ಗಣಿಗಾರಿಕೆ ನಿಲ್ಲಿಸಲಿಲ್ಲ. ಹೀಗಾಗಿ ಕಾನೂನುಬದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.












