ಬೆಂಗಳೂರು, ಮಾರ್ಚ್ 5: ‘ಬ್ರ್ಯಾಂಡ್ ಕರ್ನಾಟಕ’ ಕಾರ್ಯಕ್ರಮದಡಿ ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್‌ಎಂಇ) ವಿಶೇಷ ಆದ್ಯತೆ ನೀಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್‌ಎಂಇ, ಗಣಿ, ಜವಳಿ ಮತ್ತು ಸಕ್ಕರೆ) ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್, ಉತ್ಪನ್ನಗಳ ಸ್ಥಾನೀಕರಣ, ಗುಣಮಟ್ಟದ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಅಗತ್ಯ ಬೆಂಬಲ ಒದಗಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಉದ್ದಿಮೆಗಳು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಳೆಯಲು ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ಉಪಕ್ರಮವು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಸುಮಾರು 25 ಲಕ್ಷ ಎಂಎಸ್‌ಎಂಇಗಳಿದ್ದು, ಇವು ರಾಜ್ಯದ ಕೈಗಾರಿಕಾ ಹಾಗೂ ಉದ್ಯೋಗ ಸೃಷ್ಟಿಯ ಬೆನ್ನೆಲುಬಾಗಿವೆ. ಇದರಲ್ಲಿ ಶೇ.25 ರಷ್ಟು ಉದ್ದಿಮೆಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಬ್ರ್ಯಾಂಡಿಂಗ್ ಬಲಪಡಿಸುವಿಕೆ ಹಾಗೂ ಮಾರುಕಟ್ಟೆ ವಿಸ್ತರಣೆಗೆ ‘ಬ್ರ್ಯಾಂಡ್ ಕರ್ನಾಟಕ’ ಕಾರ್ಯಕ್ರಮವು ಎಂಎಸ್‌ಎಂಇಗಳಿಗೆ ವ್ಯವಸ್ಥಿತ ಬೆಂಬಲ ನೀಡಲಿದೆ. ಈ ಯೋಜನೆ ರಾಜ್ಯದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಯೋಜನೆಯೊಂದಿಗೆ ಸಂಯೋಜನೆಯಾಗಿದ್ದು, ಪ್ರಾದೇಶಿಕ ಉತ್ಪನ್ನಗಳ ಉತ್ತೇಜನಕ್ಕೆ ನೆರವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ‘ರ‍್ಯಾಂಪ್’ (RAMP) ಯೋಜನೆಯಡಿ ಮಹಿಳಾ ನೇತೃತ್ವದ 240 ಎಂಎಸ್‌ಎಂಇಗಳಿಗೆ ವಿಶೇಷ ವೇಗವರ್ಧಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ತಲಾ ಆರು ತಿಂಗಳ ಅವಧಿಯ 12 ಬ್ಯಾಚ್‌ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಮಹಿಳಾ ಎಂಎಸ್‌ಎಂಇ ಹ್ಯಾಕಥಾನ್’ ಕೂಡ ಆಯೋಜಿಸಲಾಗುತ್ತಿದ್ದು, ವಿಜೇತ 12 ಉದ್ದಿಮೆಗಳಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಗಳ ಅನುಷ್ಠಾನಕ್ಕಾಗಿ ಒಟ್ಟು 6.40 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಮಹಿಳೆಯರು ಇಂದು ಮಾತ್ರವಲ್ಲ, ಭವಿಷ್ಯದ ಬಗ್ಗೆ ಯೋಚಿಸುವ ಗುಣ ಹೊಂದಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ನಟಿ ಸುಧಾ ಬೆಳವಾಡಿ ಹಾಗೂ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.






