ಸಾಂಪ್ರದಾಯವಾದಿ ಬ್ರಾಹ್ಮಣರು ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಹುಟ್ಟುಹಾಕಿದ ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಬ್ರಾಹ್ಮಣೋದ್ಧಾರದ ಕೆಲಸಗಳಿಗೆ ವೇಗದ ಚಾಲನೆ ಸಿಕ್ಕಂತಾಗಿದೆ. ಸಂಘದ ಮಾತನ್ನು ಚಾಚೂ ತಪ್ಪದೆ ಶಿರಸಾವಹಿಸಿ ಪಾಲಿಸುವ ಮತ್ತು ಆ ಪಕ್ಷದ ಸಂಸ್ಥಾಪಕ ಸಮುದಾಯಕ್ಕೆ ಅನುಕೂಲವಾಗುವ ಯೋಜನೆˌ ಕಾನೂನುಗಳನ್ನು ವಿಧೇಯವಾಗಿ ಅನುಷ್ಠಾನಗೊಳಿಸುವ ಶೂದ್ರನೊಬ್ಬನನ್ನು ಪಡೆದ ಸಂಘ ಸಂಸ್ಥಾಪಕ ಸಮುದಾಯವನ್ನು ನಾವು ಅಭಿನಂದಿಸಲೇಬೇಕಿದೆ. ತಮ್ಮವರೊಬ್ಬರು ಸಿಗದಿದ್ದಾಗ ಶೂದ್ರನೊಬ್ಬನನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಸಾಂಪ್ರದಾಯವಾದಿಗಳ ನಡೆ ಅಚ್ಚರಿಯದೇನಲ್ಲ.
ಮೋದಿ ಪ್ರಧಾನಿಯಾದ ಮೇಲೆ ಶತಮಾನಗಳಿಂದ ಶೋಷಣೆಗೊಳಗಾದ ದಲಿತ ದಮನಿತರು ಹಾಗೂ ಇತರ ಹಿಂದುಳಿದ ವರ್ಗದ ಜನಜಾತಿಗಳಿಗೆ ನೀಡಲಾಗಿರುವ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಂವಿಧಾನವನ್ನು ಬದಲಿಸುವ ಮಾತುಗಳು ಕೂಡ ಮಾರ್ಧನಿಸುತ್ತಿವೆ. ಆಶ್ಚರ್ಯವೆಂದರೆ ದಮನಿತರಿಗೆ ನೀಡಲಾಗಿರುವ ಮೀಸಲಾತಿಯನ್ನು ದ್ವೇಷಿಸುವˌ ಹಾಗು ವಿರೋಧಿಸುವ ಜನರು ಮೀಸಲಾತಿಯಿಂದ ಪ್ರತಿಭೆಗೆ ಅನ್ಯಾಯವಾಗುತ್ತದೆ ಎಂದು ವಾದಿಸುತ್ತಲೆ ಕೇಂದ್ರ ನೀಡಿರುವ ೧೦% ಮೀಸಲಾತಿಯನ್ನು ತೆಗೆದುಕೊಂಡು ಬೆಣ್ಣೆ ತಿಂದ ಬೆಕ್ಕಿನಂತೆ ಕುಳಿತ್ತಿದ್ದಾರೆ.
ದುರಂತದ ಸಂಗತಿ ಏನೆಂದರೆ ಕರ್ನಾಟಕದಲ್ಲಿ ಮೇಲ್ವರ್ಗವೆಂದು ಕರೆಸಿಕೊಳ್ಳುವ ಲಿಂಗಾಯತ ಮತ್ತು ವಕ್ಕಲಿಗ ಸಮುದಾಯಗಳು ಓಬಿಸಿಯಡಿಯಲ್ಲಿ ಮೀಸಲಾತಿಯ ಫಲಾನುಭವಿಗಳಾಗಿದ್ದೂ ಕೂಡ ಸಂಘದ ಸಾಂಪ್ರದಾಯವಾದಿ ಬ್ರಾಹ್ಮಣರ ಮಾತು ಕೇಳಿ ಮೀಸಲಾತಿಯನ್ನು ದ್ವೇಷಿಸುತ್ತಿರುವುದು. ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಈ ಲಿಂಗಾಯತ ಮತ್ತು ವಕ್ಕಲಿಗರನ್ನು ಮೀಸಲಾತಿ ವಿರೋಧಿಗಳನ್ನಾಗಿ ಮಾರ್ಪಡಿಸಿದ ಸಾಂಪ್ರದಾಯವಾದಿ ಬ್ರಾಹ್ಮಣರು ಕೇಂದ್ರದಲ್ಲಿ ೧೦% ಮೀಸಲಾತಿ ಪಡೆದದ್ದಲ್ಲದೆ ರಾಜ್ಯದಲ್ಲಿ ಬ್ರಾಹ್ಮಣ ಅಭಿವ್ರದ್ಧಿ ಮಂಡಲಿ ರಚಿಸುವಂತೆ ಮಾಡಿˌ ಈಗ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯುವ ಮೂಲಕ ಶೋಷಿತರ ಮೀಸಲಾತಿಗೆ ಕನ್ನ ಹಾಕಿದ್ದಾರೆ. ಇಷ್ಟಾದರೂ ಕೂಡ ಬಿಜೆಪಿ ಪಕ್ಷದೊಳಗಿರುವ ದಲಿತ ದಮನಿತ ಸಮುದಾಯಕ್ಕೆ ಸೇರಿರುವ ಪುಢಾರಿಗಳು ಮತ್ತು ಅವರ ಮೂಲಕ ಬಿಜೆಪಿ ಬೆಂಬಲಿಸುತ್ತಿರುವ ದಲಿತ ದಮನಿತ ಸಮುದಾಯದ ಜನಕ್ಕೆ ಬುದ್ದಿ ಬಂದಂತ್ತಿಲ್ಲ.
೧೫-೧೬ ನೇ ಶತಮಾನದಲ್ಲಿ ಲಿಂಗಾಯತ ಧರ್ಮಕ್ಕೆ ಮತಾಂತರಗೊಂಡು ವಲಸೆ ಬಂದ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರು ಲಿಂಗಾಯತ ಧರ್ಮದ ಜಾತಿ ನಿರ್ಮೂಲನೆ ಮತ್ತು ಸಮತಾ ಸಿದ್ಧಾಂತಕ್ಕೆ ತದ್ವಿರುದ್ಧವಾದ ಬ್ರಾಹ್ಮಣ ಶ್ರೇಷ್ಟತೆಯನ್ನು ಬಿತ್ತುವ ಮೂಲಕ ಪ್ರಗತಿಪರ ಲಿಂಗಾಯತ ಧರ್ಮ ಅಶುದ್ಧಗೊಳಿಸಿ ವೀರಶೈವ ಎಂಬ ಪ್ರತ್ಯೇಕ ಉಪವರ್ಗವನ್ನು ಸೃಷ್ಟಿಸಿಕೊಂಡರು. ಬಸವಣ್ಣನವರನ್ನು ಕಂಡರಾಗದ ಈ ಆರಾಧ್ಯರು ಸಾಮಾನ್ಯವಾಗಿ ಬ್ರಾಹ್ಮಣ್ಯವನ್ನು ಪಾಲಿಸುತ್ತ ಬ್ರಾಹ್ಮಣ್ಯ ರಕ್ಷಕ ಬಿಜೆಪಿಯನ್ನು ಬೆಂಬಲಿಸುತ್ತಾರೆ ಮತ್ತು ಮೀಸಲಾತಿಯನ್ನು ದ್ವೇಷಿಸುತ್ತಾರೆ. ದುರಂತವೆಂದರೆ ಬ್ರಾಹ್ಮಣ ಶ್ರೇಷ್ಟತೆಯಿಂದ ಬಳಲುವ ವೀರಶೈವ ಆರಾಧ್ಯರು ತಾವು ಬುಡಗ/ಬೇಡ ಜಂಗಮರೆಂದು ಹಾಗು ತಮಗೂ ಪರಿಶಿಷ್ಟರ ಪಟ್ಟಿಯಲ್ಲಿ ಮೀಸಲಾತಿ ನೀಡಬೇಕೆಂದು ಹೋರಾಡುತ್ತಿದ್ದಾರೆ.

ದಲಿತ ದಮನಿತರಿಗೆ ಮೀಸಲಾತಿಯ ಅಗತ್ಯವೇಕಿದೆ ಎನ್ನುವುದನ್ನು ನಾನು ನನ್ನ ಸ್ವಂತ ಅನುಭವದ ಒಂದು ಘಟನೆ ನಿಮ್ಮೆದುರಿಗಿಡುತ್ತಿದ್ದೇನೆ. ಇಪ್ಪತ್ತೈದು ವರ್ಷಗಳ ಹಿಂದೆ ನಾನು ಫಾರ್ಮಸಿಯಲ್ಲಿ ಪದವಿ ಮುಗಿಸಿ ಸ್ನಾತ್ತಕೋತ್ತರ ಪದವಿಗಾಗಿ ಬೆಂಗಳೂರಿನಲ್ಲಿರುವ ಕರ್ನಾಟಕದ ಏಕೈಕ ಸರಕಾರಿ ಫಾರ್ಮಸಿ ಕಾಲೇಜಿಗೆ ಅರ್ಜಿ ಹಾಕಿದ್ದೆ. ಆಗ ನಾನು ಕಲಬುರಗಿ ವಿಶ್ವವಿದ್ಯಾಲಯದ ಗೋಲ್ಡ್ ಮೆಡಲಿಸ್ಟ್ ಆಗಿದ್ದೆ. ಸತತ ಎರಡು ಬಾರಿ ಪ್ರಯತ್ನಿಸಿದಾಗ ನನಗೆ ಎರಡನೇ ಬಾರಿ ಸೀಟು ಸಿಕ್ಕಿತ್ತು. ಅಂದು ಸ್ನಾತಕೋತ್ತರ ಪದವಿಗೆ ಲಭ್ಯವಿದ್ದ ಒಟ್ಟು ಸೀಟುಗಳು ಕೇವಲ ೨೪. ಅದರಲ್ಲಿ ೫೦% ಸೀಟುಗಳು (೧೨ ಸೀಟು) ಮೀಸಲು ಅಭ್ಯರ್ಥಿಗಳಿಗೆ ಹಂಚಿದರೆ ಉಳಿದ ೧೨ ಸೀಟುಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಲಭ್ಯವಿದ್ದವು. ಆ ೧೨ ಸಾಮಾನ್ಯ ಅಭ್ಯರ್ಥಿಗಳ ಕೋಟಾದಲ್ಲಿ ೭ ಜನ ಬ್ರಾಹ್ಮಣ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕರ್ನಾಕಟದಲ್ಲಿ ಕೇವಲ ೧.೫% ಜನಸಂಖ್ಯೆ ಹೊಂದಿರುವ ಬ್ರಾಹ್ಮಣರು ಸಾಮಾನ್ಯ ಕೋಟಾದ ೪೦% ಸೀಟುಗಳು ಪಡೆದು ಕುಳಿತರೆ ಬಹುಸಂಖ್ಯಾತರಾದ ಲಿಂಗಾಯತ-ವಕ್ಕಲಿಗರು ಪಡೆದ ಸೀಟುಗಳು ಒಂದೊ ಎರಡೊ ಮಾತ್ರ.
ಶತಶತಮಾನಗಳಿಂದ ಅಕ್ಷರ ಸಂಸ್ಕ್ರತಿಯಿಂದ ಶೂದ್ರರನ್ನು ವಂಚಿಸಿದ ಸಾಂಪ್ರದಾಯವಾದಿ ಬ್ರಾಹ್ಮಣ ಸಮುದಾಯದವರು ಶಿಕ್ಷಣದಲ್ಲಿ ಮೇಲುಗೈ ಸಾಧಿಸುತ್ತಿರುವರು ಸಹಜ. ಇನ್ನು ಮೀಸಲಾತಿ ಸೌಲಭ್ಯವೇ ಇಲ್ಲದಿದ್ದರೆ ೧೦೦% ಸೀಟುಗಳುˌ ಮತ್ತು ಉದ್ಯೋಗಗಳು ಅವರ ಪಾಲೇ ಆಗುತ್ತಿದ್ದದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗಿದ್ದ ಮೇಲೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ದಲಿತ ದಮನಿತˌ ಶೂದ್ರಾತಿ ಶೂದ್ರರಿಗೆ ಅಂದು ಸರಕಾರ ನೀಡಿದ ಮೀಸಲಾತಿ ಸೌಲಭ್ಯವು ಸಹಜ ನ್ಯಾಯ ಅಲ್ಲವೆ? ಅದನ್ನು ಬಲವಾಗಿ ವಿರೋಧಿಸುತ್ತ ಬಂದಿರುವ ಬಿಜೆಪಿ ಸಂಸ್ಥಾಪಕರಾದ ಸಾಂಪ್ರದಾಯವಾದಿ ಬ್ರಾಹ್ಮಣರು ಇಂದು ಮೀಸಲಾತಿಯನ್ನು ಏಕೆ ಒಪ್ಪಿಕೊಂಡಿದ್ದಾರೆ?
ಮೀಸಲಾತಿಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ವಾದಿಸುವ ಸಾಂಪ್ರದಾಯವಾದಿಗಳು ಅಂದು ಏಕಲವ್ಯನಿಂದ ಹಿಡಿದು ಇಂದು ಯಡಿಯೂರಪ್ಪನ ವರೆಗೆ ಎಷ್ಟು ಜನ ಶೂದ್ರ ಪ್ರತಿಭಾವಂತರಿಗೆ ಸರಿಯಾಗಿ ಸ್ವವಿವೇಚನೆಯಿಂದ ಜೀವನ ಸಾಗಿಸಲು ಮತ್ತು ಅಧಿಕಾರ ನಡೆಸಲು ಅನುವು ಮಾಡಿ ಕೊಟ್ಟಿದ್ದಾರೆ? ಈ ಪ್ರಶ್ನೆಯನ್ನು ಬಿಜೆಪಿ ಪಕ್ಷದೊಳಗಿರುವ ಸ್ವಾಭಿಮಾನ ಶೂನ್ಯ ಶೋಷಿತ ಸಮುದಾಯದ ಪುಢಾರಿಗಳು ಮತ್ತು ಬಿಜೆಪಿ ಬೆಂಬಲಿಸುತ್ತಿರುವ ಅದೇ ಸಮುದಾಯಗಳ ಮತದಾರರು ಕೇಳಬೇಕಿದೆ. ಅವರು ಹಾಗೆ ಕೇಳದೆ ಹೋದರೆ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಹೇಳಿದಂತೆ ಮುಂದಿನ ದಿನಗಳಲ್ಲಿ ಸಂವಿಧಾನದ ಬದಲಾವಣೆ ಮತ್ತು ಮೀಸಲಾತಿಯ ರದ್ದತಿ ಕಟ್ಟಿಟ್ಟ ಬುತ್ತಿ ಎನ್ನುವುದು ಶೋಷಿತರು ಅರಿಯಬೇಕಿದೆ.
ಭಾರತದಲ್ಲಿ ಮೀಸಲಾತಿ ಪರಂಪರೆ ಹೊಸದೇನಲ್ಲ. ಅದು ವೇದ ಕಾಲದಿಂದಲೂ ಜಾರಿಯಲ್ಲಿದೆ. ದೇವಸ್ಥಾನಗಳ ಪೌರೋಹಿತ್ಯ ˌ ರಾಜರ ಆಸ್ಥಾನದ ಎಲ್ಲಾ ಸ್ಥಾನಮಾನಗಳುˌ ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧಕರ ಹುದ್ದೆಗಳು ಮತ್ತು ಅಲ್ಲಿ ಜ್ಞಾನಾರ್ಜನೆಗೆ ತೊಡಗುವ ವಿದ್ಯಾರ್ಥಿಗಳ ಆಯ್ಕೆ ಇವೆಲ್ಲವೂ ಬ್ರಾಹ್ಮಣರಿಗೆ ಮಾತ್ರ ಮೀಸಲಿದ್ದವು. ಆಸ್ತಿ ಮತ್ತು ಸಂಪತ್ತು ಹೊಂದುವುದುˌ ರಾಜ್ಯ ಆಳುವವರನ್ನು ನಿಯಂತ್ರಿಸುವುದು ಮುಂತಾದ ಸಮಾಜದ ಪ್ರತಿಯೊಂದು ಒಳಿತು ಬ್ರಾಹ್ಮಣರಿಗೆ ಮಾತ್ರ ಮೀಸಲಿತ್ತು. ಅಂದರೆ ಬ್ರಾಹ್ಮಣರು ಅಂದು ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಬಹುಜನರಿಗೆ ವಂಚಿಸಿ ಪಡೆಯುತ್ತಿದ್ದರು. ಇಂದಿನ ಸಂವಿಧಾನಬದ್ಧ ಮೀಸಲಾತಿಯು ಕೇವಲ ೫ % ಜನಸಂಖ್ಯೆ ಹೊಂದಿರುವ ಬ್ರಾಹ್ಮಣರು ಮತ್ತಿತರ ೧೦-೧೫% ಮೇಲ್ವರ್ಗದವರಿಗೆ ೫೦% ಮೀಸಲಾತಿಯನ್ನು ಬಿಟ್ಟುಕೊಟ್ಟು ಉಳಿದ ೮೫-೯೦% ಜನಜಾತಿಗಳು ಇನ್ನುಳಿದ ೫೦% ಮೀಸಲಾತಿಯಲ್ಲಿ ತೃಪ್ತಿಪಟ್ಟುಕೊಳ್ಳುತ್ತಿದ್ದರೂ ಕೂಡ ಸಾಂಪ್ರದಾಯವಾದಿ ಬ್ರಾಹ್ಮಣರು ಮತ್ತು ಇತರ ಮೇಲ್ವರ್ಛದವರು ಮೀಸಲಾತಿಯನ್ನು ದ್ವೇಷಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಸ್ವರಾಜ್ಯ ಪಡೆದು ಎಪ್ಪತ್ತು ವರ್ಷಗಳ ನಂತರವೂ ಭಾರತದ ಜನಸಂಖ್ಯೆಯ ಕೇವಲ ೫% ರಷ್ಟಿರುವ ಬ್ರಾಹ್ಮಣರು ಶಾಸಕಾಂಗˌ ಕಾರ್ಯಾಂಗˌ ನ್ಯಾಯಾಂಗˌ ಪತ್ರಿಕಾರಂಗˌ ಸಾಂಸ್ಕ್ರತಿಕ-ಸಾರಸ್ವತರಂಗˌ ಕ್ರೀಡಾರಂಗ ಮೊದಲ್ಗೊಂಡು ಪ್ರತಿಯೊಂದು ರಂಗದಲ್ಲೂ ಶೇಕಡ ೫೦% ಕ್ಕೂ ಹೆಚ್ಚಿನ ಪ್ರಾಬಲ್ಯ ಹೊಂದಿದ್ದಲ್ಲದೆ ಕರ್ನಾಟಕದಲ್ಲಿ ಲಿಂಗಾಯತರು ನಡೆಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನ ರಹಿತ ಅಂಗ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ಜನರಿಗೆ ಮಂಕುಬೂದಿ ಎರಚುವ ಮೂಲಕ ಪ್ರತಿಭಾವಂತ ಲಿಂಗಾಯತರು ಬರದಂತೆ ಮಾಡಿ ಆಯಕಟ್ಟಿನ ಸ್ಥಾನಗಳನ್ನು ತಾವೇ ಅತಿಕ್ರಮಿಸಿ ಕುಳಿತಿರುವಾಗ ಮತ್ತೆ ಮೀಸಲಾತಿಯ ಅಗತ್ಯವಿತ್ತೆ? ಪ್ರತಿಭೆಗೆ ಅನ್ಯಾಯ ಆಗುತ್ತದೆಂದು ತಾವೇ ಹಲುಬಿ ಅದೇ ಮೀಸಲಾತಿಯನ್ನು ಕಳ್ಳ ಬೆಕ್ಕಿನಂತೆ ಪಡೆದು ಕುಳಿತಿರುವ ಇವರು ಈಗ ಮೀಸಲಾತಿಯ ಮರು ವ್ಯಾಖ್ಯಾನ ಮಾಡುವರೆ ಅಥವ ತಾವೂ ಕೂಡ ಮೀಸಲಾತಿ ಪಡೆಯಲೋಸುಗ ದಮನಿತರ ಮೀಸಲಾತಿಯನ್ನು ವಿರೋಧಿಸಿದರೆ ಎನ್ನುವ ಕುರಿತು ಮೀಸಲಾದಿ ವಿರೊಧಿಗಳಾದ ಬ್ರಾಹ್ಮಣರು ಮತ್ತು ಇತರ ಮೇಲ್ವರ್ಗದವರು ಸ್ಪಷ್ಟೀಕರಣ ನೀಡಬೇಕಿದೆ.








